ಮಳವಳ್ಳಿ ಪಟ್ಟಣದ ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಬದಿಯಲ್ಲಿರುವ ಕಳ್ಳತನ ನಡೆದಿರುವ ದಂಡಿನ ಮಾರಮ್ಮ ದೇವಸ್ಥಾನ.
ಪಟ್ಟಣದ ಗ್ರಾಮದೇವತೆ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ದೇಗುಲದ ಬೀಗ ಮುರಿದು ಹುಂಡಿಯಲ್ಲಿದ್ದ ಹಣ ಕಳವು ಮಾಡಲಾಗಿದೆ.
ಪಟ್ಟಣದ ದೊಡ್ಡಕೆರೆಗೆ ಹೊಂದಿಕೊಂಡ ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಬದಿಯಲ್ಲಿರುವ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಹಲವು ಬಾರಿ ಈ ದೇವಸ್ಥಾನದಲ್ಲಿ ಕಳವು ಪ್ರಕರಣಗಳು ನಡೆದಿದ್ದು, ಕಳ್ಳರ ಉಪಟಳ ಹತ್ತಿಕ್ಕಲು ದೇವಸ್ಥಾನದ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ ತಡರಾತ್ರಿ ಕನ್ನ ಹಾಕಲು ಬಂದಿದ್ದ ಖದೀಮರು ಕಳ್ಳತನಕ್ಕೂ ಮುನ್ನ ದೇಗುಲದಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾಗಳನ್ನು ಒಡೆದು ಹಾಕಿ ಗರ್ಭಗುಡಿಯ ಮುಂದೆ ಇರಿಸಿದ್ದ ಹುಂಡಿ ಹೊತ್ತೊಯ್ದಿದ್ದಾರೆ. ದೇವಸ್ಥಾನದ ಸಮೀಪವೇ ಹುಂಡಿಯನ್ನು ಒಡೆದು ಒಳಗಿದ್ದ ಹಣವನ್ನು ದೋಚಿ ಹುಂಡಿ ಬಿಸಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಮಾಹಿತಿ ಕಲೆ ಹಾಕಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.