ದೇವೇಗೌಡನದೊಡ್ಡಿ-ಮೆಣಸಗೆರೆ ಗ್ರಾಮದಲ್ಲಿ ಕಾರಕಹಳ್ಳಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಏರ್ಪಡಿಸಿದ್ದ ತವರೂರು ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾಸಲಾಯಿತು. ಮಧು ಜಿ. ಮಾದೇಗೌಡ, ಬಿ. ಗಿರೀಶ್, ಆರ್.ಸಿದ್ದಪ್ಪ. ಮದ್ದೂರು ಅವಿನಾಶ್ ಇದ್ದರು.
- ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಬೇಸರ
ಕೆ.ಎಂ.ದೊಡ್ಡಿ: ಉನ್ನತ ವಿದ್ಯಾಭ್ಯಾಸ ಪಡೆದು ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಹುಟ್ಟಿದ ಊರನ್ನು ಮರೆಯದೆ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಕಿವಿಮಾತು ಹೇಳಿದರು.
ಸಮೀಪದ ದೇವೇಗೌಡನದೊಡ್ಡಿ-ಮೆಣಸಗೆರೆ ಗ್ರಾಮದಲ್ಲಿ ಕಾರಕಹಳ್ಳಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ತವರಿನ ತಮ್ಮ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪದವೀಧರರ ತವರೂರು ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುತೇಕ ಹಳ್ಳಿಗಳು ಇಂದು ವೃದ್ಧರ ಗ್ರಾಮಗಳಾಗುತ್ತಿವೆ. ತಂದೆ ತಾಯಿಗಳು ಕಷ್ಟಪಟ್ಟು ಮಕ್ಕಳನ್ನು ಓದಿಸಿದ ನಂತರ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಲು ಬೆಂಗಳೂರು - ಮೈಸೂರಿನಂತಹ ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಸೇರುತ್ತಿದ್ದಾರೆ. ತಮ್ಮ ಹುಟ್ಟೂರನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀ ವಿದ್ಯಾಸಂಸ್ಥೆಯ ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್‌ಲೆನ್ಸ್ ವಿದ್ಯಾರ್ಥಿಗಳು ವೈದ್ಯರು ಮತ್ತು ಇಂಜಿನಿಯರ್ ಪದವಿ ಮುಗಿಸಿ ಜನರ ಸೇವೆಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಸಂಸ್ಥೆಯ ಶಿಕ್ಷಕರ ಮತ್ತು ವಿದ್ಯಾಥಿಗಳ ಪರಿಶ್ರಮಕ್ಕೆ ನಾನು ನಿಜಕ್ಕೂ ಅಭಾರಿಯಾಗಿದ್ದೆನೆ ಎಂದು ಭಾವುಕರಾದರು.
ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಭಾರತೀ ವಿದ್ಯಾಸಂಸ್ಥೆ ಪ್ರಾರಂಭವಾಗಿ 62 ವರ್ಷಗಳಾಗಿವೆ. ಈ ಭಾಗದ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಮಂದಿ ಸಂಸ್ಥೆಯಿಂದ ವಿದ್ಯಾಭ್ಯಾಸ ಪಡೆದು ಡಾಕ್ಟರ್, ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆದು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಯುವ ಸಮುದಾಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮನ್ನು ಬಹು ಎತ್ತರಕ್ಕೆ ಬೆಳೆಸಿದ ಪಾಲಕರು, ಹುಟ್ಟಿದ ಊರುಗಳನ್ನು ಮರೆಯಬಾರದು. ಸ್ಥಳೀಯವಾಗಿ ಸಾಮಾಜಿಕ ಸೇವೆಗಳನ್ನು ಹಮ್ಮಿಕೊಂಡು ಹಿರಿಯರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವಕರು ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಆಗ ಮಾತ್ರ ತಮ್ಮ ಉದ್ಯೋಗಕ್ಕೆ ಬೆಲೆ ಬಂದಂತಾಗುತ್ತದೆ. ರೈತರ ಮಕ್ಕಳು ಉದ್ಯೋಗ ಪಡೆದು ನಗರ ಪ್ರದೇಶಗಳನ್ನು ಸೇರಿಕೊಳ್ಳುತ್ತಿದ್ದಾರೆ. ತಮ್ಮ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ವಿಷಾದಿಸಿದರು.ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹಾಗೂ ಕಾಂಗ್ರೆಸ್ ಮುಖಂಡ ಆಶಯ್ ಮಧು ಮತ್ತು ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.
ವೈದ್ಯರಾದ ಡಾ.ಡಿ.ಪಿ.ಸಂತೃಪ್ತ, ಡಾ.ಕೀರ್ತಿರಾಜು, ಡಾ.ಡಿ.ಆರ್. ಕಾವ್ಯಾ, ಡಾ.ವಿದ್ಯಾಶ್ರೀ, ಡಾ.ಭೂಮಿಕಾ, ಡಾ.ಡಿ.ಪಿ.ಸಂಕೀರ್ತ್, ಇಂಜಿನಿಯರ್ ಡಿ.ಪಿ.ಮಧುಗೌಡ, ಆರ್.ಮಾನಸಾ ಅವರನ್ನು ತವರೂರಿನಿಂದ ಹಿರಿಯರು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ತಾ.ಪಂ. ಮಾಜಿ ಸದಸ್ಯ ಬಿ. ಗಿರೀಶ್, ಅಣ್ಣೂರು ಸೊಸೈಟಿ ಮಾಜಿ ಅಧ್ಯಕ್ಷ ಆರ್. ಸಿದ್ದಪ್ಪ. ಯುವ ಮುಖಂಡ ಮದ್ದೂರು ಅವಿನಾಶ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ರಾಜಪ್ಪ, ಸದಸ್ಯರಾದ ಕೆಂಪರಾಜು, ಎಂ.ಕೆ.ಮಹದೇವು, ಗ್ರಾಮದ ಮುಖಂಡರಾದ ಬಿ.ಬೋರಯ್ಯ, ಚಿಕ್ಕಮೊಗೇಗೌಡ, ನಾಡಗೌಡರ ಸೋಮು, ವಕೀಲ ಬೊಮ್ಮೇಗೌಡ ಕಾರ್ ರಾಜೇಗೌಡ, ತಮ್ಮಣ್ಣ, ಕುಳೇಗೌಡ, ಬೋರೇಗೌಡ, ಬಸವರಾಜು, ಸಚಿನ್, ಸ್ವಾಮಿ ಸೇರಿದಂತೆ ಮತ್ತಿತರಿದ್ದರು.