ಕೂಳಗೆರೆ ಕೆರೆಗೆ ಶಾಸಕ ಕದಲೂರು ಉದಯ್ ಬಾಗಿನ ಅರ್ಪಿಸಿದರು. 
ಮಂಡ್ಯ

ವಿಪಕ್ಷದಿಂದ ಜನರನ್ನು ಎತ್ತಿಕಟ್ಟುವ ಕೆಲಸ

ಕೆ.ಎಂ.ದೊಡ್ಡಿ: ಗೆಜ್ಜಲಗೆರೆ ನಗರಸಭೆ ಸೇರ್ಪಡೆ ವಿಚಾರವಾಗಿ ವಿರೋಧ ಪಕ್ಷದವರು ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಕದಲೂರು ಉದಯ್ ಆಕ್ರೋಶ ವ್ಯಕ್ತಪಡಿಸಿದರು.
ಸಮೀಪದ ಕೂಳಗೆರೆ ಕೆರೆಗೆ ಶನಿವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಹೆಸರಿನಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ ಎತ್ತಿಕಟ್ಟುವ ಕೆಲಸ ನಡೆಯುತ್ತಿದ್ದು, ಇದಕ್ಕೆ ನಾನು ಕಿವಿಕೊಡುವುದಿಲ್ಲ. ನಾನು ಶಾಶ್ವತವಾದ ಕೆಲಸಗಳನ್ನು ಮಾಡಲು ಕಾರ್ಯಪ್ರವೃತ್ತನಾಗಿದ್ದು, ಕೆಲಸಗಳಿಗೆ ಕೆಲವರು ಅಡ್ಡಿಪಡಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೆಜ್ಜಲಗೆರೆ ನಗರಸಭೆಗೆ ಸೇರ್ಪಡೆ ಸಂಬಂಧ ಹೋರಾಟಗಾರರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೋರಾಟಕ್ಕೆ ಇಳಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸುವುದು ಅವರ ಹಕ್ಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿವರೆಗೆ ಪ್ರತಿಭಟಿಸುವ ಹಕ್ಕನ್ನು ನೀಡಿದ್ದು, ಆ ನಿಟ್ಟಿನಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಲಿ. ಪ್ರತಿಭಟನೆ ವಿಚಾರದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮದ್ದೂರು ತಾಲೂಕಿನ ಪೊಲೀಸ್ ಅಧಿಕಾರಿಗಳು ಶಾಸಕರ ಗುಲಾಮರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿದ್ದಾಗ ಜೆಡಿಎಸ್ ಪಕ್ಷದವರು ಪೊಲೀಸ್ ಅಧಿಕಾರಿಗಳನ್ನು ಗುಲಾಮರಾಗಿಸಿಕೊಂಡು ಅಮಾಯಕರ ಮೇಲೆ ಸುಳ್ಳು ಕೇಸು ದಾಖಲಿಸಿ ದರ್ಪ ಮೆರೆದಿದ್ದಾರೆ ಎಂದು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಹೆಸರು ಹೇಳದೆ ಕಿಡಿಕಾರಿದರು.
ನಾನು ಸರ್ಕಾರಿ ಅಧಿಕಾರಿಗಳ ಕರ್ತವ್ಯಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ಅವರಿಗೆ ಸ್ವತಂತ್ರವಾಗಿ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದೇನೆ. ಈ ಬಗ್ಗೆ ಕ್ಷೇತ್ರದ ಜನತೆಗೆ ತಿಳಿದಿದೆ ಎಂದರು.
ರಾಜ್ಯಪಾಲರ ನಡೆಗೆ ಕಿಡಿ: ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣವನ್ನು ರಾಜ್ಯಪಾಲರು ಓದದೆ ದೇಶದ ಸಂವಿಧಾನ, ರಾಷ್ಟ್ರಗೀತೆ ಹಾಗೂ ರಾಜ್ಯಪಾಲರ ಹುದ್ದೆಗೆ ಅಗೌರವ ತೋರಿದ್ದಾರೆ ಎಂದು ಉದಯ್ ಕಿಡಿಕಾರಿದರು.
ಮನರೇಗಾ ಹೆಸರನ್ನು ತೆಗೆದು ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಕೂಲಿಕಾರರ ಹಕ್ಕನ್ನು ಕಸಿಯುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತರಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಓದದೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಏಜೆಂಟ್‌ರಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.