ಶ್ರೀರಂಗಪಟ್ಟಣ: ಚಿಂದಿ ಆಯುವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಆಕೆಯನ್ನು ಕೊಲೆಗೈದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಇಬ್ಬರು ಆರೋಪಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮಂಡ್ಯದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗಳಿಗೆ 30 ಸಾವಿರ ರೂ. ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ನರೆಗ್ಯಾತನಹಳ್ಳಿ ಗ್ರಾಮದ ಮಹದೇವಯ್ಯ ಎಂಬುವರ ಪುತ್ರ ಶಿವಕುಮಾರ ಅಲಿಯಾಸ್ ಕಪಿ ಶಿವ ಹಾಗೂ ತಾಲೂಕಿನ ಪಾಲಹಳ್ಳಿ ಗ್ರಾಮದ ಗಾಂಧಿನಗರ ನಿವಾಸಿ ಲೇ.ಗೋಪಾಲಶೆಟ್ಟಿ ಅವರ ಪುತ್ರ ರಾಜೇಶ ಶಿಕ್ಷೆಗೆ ಗುರಿಯಾದವರು.
ಕಳೆದ 2020ರಲ್ಲಿ ಈ ಇಬ್ಬರೂ ಅಪರಾಧಿಗಳು ತಮ್ಮ ಪಾಲಕರ ಸಹಿತ ಗ್ರಾಮವನ್ನು ತೊರೆದು ಶ್ರೀರಂಗಪಟ್ಟಣಕ್ಕೆ ಆಗಮಿಸಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿಂದಿ ಆಯುವ ಕೆಲಸ ಮಾಡಿ ಗುಜರಿಗೆ ಹಾಕಿ ಬಂದ ಹಣದಿಂದ ಬದುಕುತ್ತಿದ್ದರು. ಅಂತೆಯೇ ಹುಣಸೂರು ಮೂಲದ ಮೀನಾ ಎಂಬಾಕೆ ಊರು ಬಿಟ್ಟು ಪಟ್ಟಣದಲ್ಲಿ ಚಿಂದಿ ಆಯ್ದುಕೊಂಡಿದ್ದು, ಈಕೆಯನ್ನು ಈ ಇಬ್ಬರೂ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಎಲ್ಲರು ಒಟ್ಟಾಗಿ ಕೆಲಸ ಮಾಡಿ ಮದ್ಯ ಸೇವಿಸುತ್ತಿದ್ದರು.
2020ರ ಮಾ.3ರ ಬೆಳಗ್ಗೆ ಶಿವ ಮತ್ತು ರಾಜೇಶ ಈ ಇಬ್ಬರೂ ಮೀನಾಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಸಲುವಾಗಿ ಪುಸಲಾಯಿಸಿ ಚಿಂದಿ ಆಯ್ದುಕೊಂಡು ಬರುವ ನೆಪದಲ್ಲಿ ಪಟ್ಟಣ ಹೊರವಲಯದ ಸನ್‌ಪ್ಯೂರ್ ಆಯಿಲ್ ಕಾರ್ಖಾನೆ ಎದುರಿನ ಮೈಸೂರು-ಬೆಂಗಳೂರು ರಸ್ತೆ ಪಕ್ಕದ ಕೋಟೆಯ ಕಂದಕದೊಳಗಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯನ್ನು ಒಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಮೀನಾ ಆಸ್ಪದ ನೀಡದಿದ್ದ ವೇಳೆ ಆಕೆಯ ಮೇಲೆ ಈ ಇಬ್ಬರೂ ಬಲವಂತದ ದೌರ್ಜನ್ಯ ಎಸಗಿದ್ದಾರೆ. ಬಳಿಕ ಈ ವಿಚಾರ ಕುರಿತು ಮೀನಾ ಪೊಲೀಸರಿಗೆ ತಿಳಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಶಿವ ಮತ್ತು ರಾಜೇಶ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಕಲ್ಲುಗಳನ್ನು ಆಕೆಯ ಮೇಲೆ ಎತ್ತುಹಾಕಿ ಕೊಲೆಗೈದು ಆಕೆಯ ಗುರುತು ಸಿಗದಂತೆ ಮಾಡಿದ್ದರು.
ಈ ಕೃತ್ಯದ ಬಳಿಕ ಪ್ರಕರಣ ಕುರಿತು ಅಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಶ್ರೀರಂಗಪಟ್ಟಣ ಟೌನ್ ಠಾಣೆ ಇನ್‌ಸ್ಪೆಕ್ಟರ್ ಮುದ್ದು ಮಹದೇವು ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಡಿ.ಯೋಗೇಶ್ ಸಾಕ್ಷ್ಯ ಸಂಗ್ರಹಿಸಿ ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಡ್ಯದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ.ಯಾದವ್ ಅವರು ಸಾಕ್ಷ್ಯಗಳನ್ನು ಪರಾಮರ್ಶಿಸಿ ಆರೋಪಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ತಪ್ಪಿದ್ದಲ್ಲಿ 6 ತಿಂಗಳು ಸಜೆ, ಕಲಂ 201ರ ಅನ್ವಯ 2 ವರ್ಷ ಸರಳ ಶಿಕ್ಷೆ 5 ಸಾವಿರ ರೂ. ದಂಡ ತಪ್ಪಿದ್ದಲ್ಲಿ 2 ತಿಂಗಳ ಸಜೆ ನೀಡಿ ತೀರ್ಪು ನೀಡಿದ್ದಾರೆ. ನ್ಯಾಯಾಲಯದಲ್ಲಿ ಅಪರಾಧಿಗಳ ವಿರುದ್ಧ ಸರ್ಕಾರಿ ಅಭಿಯೋಜಕ ನಾಗರಾಜು ವಾದ ಮಂಡಿಸಿದ್ದರು.