ಸುನಂದ ಜಯರಾಮ್ 
ಮಂಡ್ಯ

ಯಾರದೇ ಕುಮ್ಮಕ್ಕಿನಿಂದ ಧರಣಿ ನಡೆಯುತ್ತಿಲ್ಲ

ಶಾಸಕ ಉದಯ್ ಆರೋಪಕ್ಕೆ ರೈತಪರ ಹೋರಾಟಗಾರ್ತಿ ಸುನಂದಾ ಜಯರಾಮ್ ಹೇಳಿಕೆ

ಮದ್ದೂರು: ತಾಲೂಕಿನ ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಗೆ ಸೇರ್ಪಡೆ ವಿರೋಧಿಸಿ 24 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಯಾರದೇ ಕುಮ್ಮಕ್ಕಿನಿಂದ ನಡೆಯುತ್ತಿಲ್ಲ, ರಾಜಕೀಯ ಪ್ರೇರಿತವೂ ಅಲ್ಲ ಎಂದು ರೈತಪರ ಹೋರಾಟಗಾರ್ತಿ ಸುನಂದಾ ಜಯರಾಮ್ ಹೇಳಿದರು.
ಗ್ರಾಮದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯು ಗ್ರಾಮ ಪಂಚಾಯಿತಿ ಹಾಗೂ ಗ್ರಾಮದ ಉಳಿವಿಗಾಗಿ ಗ್ರಾಮಸ್ಥರು ನಡೆಸುತ್ತಿರುವ ಹೋರಾಟವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದರೆ ಸೋಮವಾರ ಈ ಬಗ್ಗೆ ಶಾಸಕ ಕೆ.ಎಂ.ಉದಯ್ ಅವರು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ಭಾನುವಾರ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದಿರುವುದು ಖಂಡನೀಯವೆಂದರು.
ವಿಪಕ್ಷ ನಾಯಕರು ನಮ್ಮ ಬಳಿ ಹೋರಾಟದ ಬಗ್ಗೆ ಮಾಹಿತಿ ಕೇಳಿ ಪ್ರತಿಭಟನೆಯನ್ನು ಬೆಂಬಲಿಸಲು ಬಂದಿದ್ದರು ಎಂದ ಅವರು, ನಾಳೆ ಬೇರೆಯವರಿಗೂ ಈ ಬಗ್ಗೆ ಮಾಹಿತಿ ಕೇಳಿದರೆ ಕೊಡುತ್ತೇವೆ ಎಂದರು.
ಶಾಸಕ ಕೆ.ಎಂ.ಉದಯ್ ಅವರು ಕಳೆದೆರಡು ವರ್ಷಗಳಿಂದ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ನಾವು ಯಾವುದೇ ವಿರೋಧ ಮಾಡುತ್ತಿಲ್ಲ. ಆದರೆ, ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ನಗರಸಭೆ ಸೇರ್ಪಡೆ ವಿಚಾರವಾಗಿ ನಾವು ಅವರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಹಲವು ದಶಕಗಳಿಂದ ನಾನು ಸೇರಿದಂತೆ ರೈತ ಸಂಘದ ಹಲವು ಪ್ರಮುಖರು ಯಾವ ರೀತಿ ನ್ಯಾಯಯುತ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂಬುದು ಜನತೆ ಅರಿತ್ತಿದ್ದಾರೆ, ಶಾಸಕರಿಗೂ ತಿಳಿದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ರಾಧಾ, ಸದಸ್ಯರಾದ ಶಶಿಕುಮಾರ್, ಭಾಗ್ಯಾ, ಶಿವಯ್ಯ, ಜಯಮ್ಮ, ಲಕ್ಷ್ಮಮ್ಮ, ಸುವರ್ಣಾ, ಮುಖಂಡರಾದ ಪ್ರಕಾಶ್, ಚಂದ್ರಶೇಖರ್, ಶಂಕರ್, ಚಂದ್ರು, ಯೋಗೇಶ್, ಲೋಕೇಶ್ ಸೇರಿದಂತೆ ಇತರರು ಇದ್ದರು.