ಭಾ.ವಿ.ಪ. ದಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದ ವೇಳೆ ವೈದ್ಯ ಡಾ.ಆರ್.ಯೋಗೇಂದ್ರಪ್ರಸಾದ್ ಅವರನ್ನು ಗೌರವಿಸಲಾಯಿತು. ಡಾ.ಸಿದ್ದೇಗೌಡ, ಶಿವನಂಜಯ್ಯ, ಎಲ್.ಚಂದ್ರಶೇಖರ್, ಡಿ.ಪಿ.ಸ್ವಾಮಿ, ಮಹದೇವು, ಸಿ.ಅಪೂರ್ವಚಂದ್ರ ಇದ್ದರು. 
ಮಂಡ್ಯ

ವೈದ್ಯರ ಸೇವೆಗೆ ಬೆಲೆಕಟ್ಟಲಾಗದು

ಪ್ರಮುಖ ಮುಖ್ಯಾಂಶಗಳು

  • service of doctors

ಮದ್ದೂರು:

ಸಮಾಜದ ಎಲ್ಲ ವರ್ಗದ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಿತ್ಯ ಸೇವೆ ಸಲ್ಲಿಸುವ ವೈದ್ಯರ ಬದುಕು ಅನುಕರಣೀಯ ಎಂದು ಹಿರಿಯ ಹೃದ್ರೋಗ ತಜ್ಞ ಡಾ.ಸಿದ್ದೇಗೌಡ ಬಣ್ಣಿಸಿದರು.

ನಗರದ ಮದ್ದೂರು ಭಾರತ್ ವಿಕಾಸ್ ಪರಿಷತ್ ಕದಂಬ ಶಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವ ಉಳಿಸುವ ವೈದ್ಯರನ್ನು ಭೂಮಿಯ ಮೇಲಿನ ಪ್ರತ್ಯಕ್ಷ ದೇವರೆಂದು, ಅವರ ಸೇವೆಯನ್ನು ಸ್ಮರಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎದರು.
ವೈದ್ಯರ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಅವರ ಮೇಲಿನ ಗೌರವವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಪ್ರತಿದಿನವೂ ಅವರ ಕೆಲಸವನ್ನು ಗೌರವಿಸುವುದು ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಹಿರಿಯ ವೈದ್ಯ ಡಾ.ಆರ್.ಯೋಗೇಂದ್ರ ಪ್ರಸಾದ್ ಅವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂಜಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಭಾರತ್ ವಿಕಾಸ್ ಪರಿಷತ್ ಕದಂಬ ಶಾಖೆಯ ಅಧ್ಯಕ್ಷ ಎಲ್.ಚಂದ್ರಶೇಖರ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಪದಾಧಿಕಾರಿಗಳಾದ ಚನ್ನಸಂದ್ರ ಮಹದೇವು, ಎಚ್.ಕೆ.ವೀರಣ್ಣಗೌಡ ಕಾಲೇಜು ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಶಿವಕುಮಾರ್, ಪ್ರೊ.ಬಿ ಕೃಷ್ಣ, ಶಂಕರಯ್ಯ, ಉಪನ್ಯಾಸಕ ಆನಂದ್ ಉಪಸ್ಥಿತರಿದ್ದರು.