ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಎಂ.ಇ.ಮೋಹನ್‌ಗೌಡ ಸಸಿ ನೆಟ್ಟು ನೀರುಣಿಸಿದರು. ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಕೃಷ್ಣಮೂರ್ತಿ, ಎನ್.ಮರೀಗೌಡ, ದಿನೇಶ್, ಬಿ.ಜಿ.ಕುಮಾರ್, ನಾಗರಾಜು ಇದ್ದರು.
ಶ್ರೀರಂಗಪಟ್ಟಣ: ಪರಿಸರ ಅಸಮತೋಲನ ನಿಯಂತ್ರಣ ಮತ್ತು ಜೀವಸಂಕುಲದ ಉಳಿವಿಗಾಗಿ ಮಕ್ಕಳ ಮನಸ್ಸಿನಲ್ಲಿ ಈಗಿನಿಂದಲೇ ಪಠ್ಯ ಶಿಕ್ಷಣದ ಜತೆಗೆ ಪ್ರಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಶಿಕ್ಷಕರು ಮತ್ತು ಪಾಲಕರ ಹೊಣೆ ಎಂದು ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಂ.ಇ.ಮೋಹನ್‌ಗೌಡ ಹೇಳಿದರು.
ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ಅರಣ್ಯ ಇಲಾಖೆ, ವಕೀಲರ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಸಿ ನೆಟ್ಟು ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಜಾಗತಿಕ ತಾಪಮಾನ ಮಿತಿಮೀರಿದ್ದು, ಪರಿಸರ ಅಸಮಾತೋಲನದ ಕಾರಣ ಋತುಮಾನವೇ ಅದಲು ಬದಲಾಗಿ ಬಿಸಿಲು, ಮಳೆ, ಚಳಿಗಾಲದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿವೆ. ಮನುಷ್ಯ ತನ್ನ ಸ್ವಾರ್ಥ ಹಾಗೂ ದುರಾಸೆಯ ಕಾರಣಕ್ಕೆ ಹಸಿರು ಗಿಡ-ಮರ, ಬೆಟ್ಟ ಗುಡ್ಡಗಳ ವಿನಾಶ, ನೀರು, ವಾಯು ಮಾಲಿನ್ಯ ಸೇರಿದಂತೆ ಹಲವು ರೀತಿಯಲ್ಲಿ ಪ್ರಕೃತಿ ಮೇಲಿನ ದೌರ್ಜನ್ಯವೇ ಪ್ರಮುಖ ಕಾರಣವಾಗಿದೆ. ಸಕಲ ಜೀವರಾಶಿಗಳ ಉಳಿವುಗಾಗಿ ಪರಿಸರ ಅತ್ಯಾವಶ್ಯಕವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ನಿತ್ಯವೂ ಸಸಿಗಳನ್ನು ನೆಟ್ಟು ನೀರುಣಿಸಿ ಪೋಷಿಸಿ ಕಾಳಜಿ ಮಾಡಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಮಕ್ಕಳು ಪರಿಸರ ಕಾಳಜಿಯನ್ನು ಚಿಕ್ಕಂದಿನಿಂದಲೇ ಮೈಗೂಡಿಸಬೇಕಿದೆ ಎಂದು ಸಲಹೆ ನೀಡಿದರು.
ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಕೃಷ್ಣಮೂರ್ತಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಎನ್.ಮರೀಗೌಡ, ಕಾರ್ಯದರ್ಶಿ ದಿನೇಶ್, ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ತಾಲೂಕು ವಲಯ ಅರಣ್ಯ ಅಧಿಕಾರಿ ನಾಗರಾಜು, ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಶ್ರೀನಿವಾಸ ಅಗ್ರಹಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇದ್ದರು.