ನಾಗಮಂಗಲ: ಸರ್ಕಾರಿ ಶಾಲೆಗಳಲ್ಲಿ ಗುರು, ಶಿಷ್ಯರ ನಡುವಿನ ಬಾಂಧವ್ಯ ಪಠ್ಯದ ಜತೆಗೆ ತಮ್ಮ ಕುಟುಂಬದಲ್ಲಿ ಒಬ್ಬರಂತೆ ಇರುತ್ತದೆ ಎಂದು ನಿವೃತ್ತ ಶಿಕ್ಷಕ ಎಸ್.ಕೆ.ಹನುಮೇಗೌಡ ಹೇಳಿದರು.
ನಾಗಮಂಗಲ: ಸರ್ಕಾರಿ ಶಾಲೆಗಳಲ್ಲಿ ಗುರು, ಶಿಷ್ಯರ ನಡುವಿನ ಬಾಂಧವ್ಯ ಪಠ್ಯದ ಜತೆಗೆ ತಮ್ಮ ಕುಟುಂಬದಲ್ಲಿ ಒಬ್ಬರಂತೆ ಇರುತ್ತದೆ ಎಂದು ನಿವೃತ್ತ ಶಿಕ್ಷಕ ಎಸ್.ಕೆ.ಹನುಮೇಗೌಡ ಹೇಳಿದರು.
ತಾಲೂಕಿನ ಬೆಳ್ಳೂರು ಪಟ್ಟಣದ ಎಎಲ್‌ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ 1987-88ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುವುದು ಎಂದರೆ ಶಿಕ್ಷಕರಿಗೆ ಎಲ್ಲಿಲ್ಲದ ಪ್ರೀತಿ. ಏಕೆಂದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಮನಸ್ಸು ಅಷ್ಟು ನಿಷ್ಕಲ್ಮಶ ಹಾಗೂ ನಿರ್ಮಲವಾದುದ್ದಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಮುಂದೆ ಎಂತಹ ದೊಡ್ಡ ಹುದ್ದೆಗೆ ಪದೋನ್ನತಿ ಪಡೆದರೂ ತನ್ನ ಪ್ರಾಥಮಿಕ ಶಾಲಾ ಹಂತದ ಸೇವೆಯನ್ನೇ ಹೆಚ್ಚು ನೆನೆಯುತ್ತಾನೆ. ಏಕೆಂದರೆ ಅದು ಆ ಶಿಕ್ಷಕನಿಗೆ ತವರು ಮನೆಯಿದ್ದಂತಾಗಿರುತ್ತದೆ. ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಕಟ್ಟಿ ಮಕ್ಕಳನ್ನು ದಾಕಲಿಸಿದರೂ ಶಿಕ್ಷಕ ಹಾಗೂ ಮಕ್ಕಳ ನಡುವೆ ಗುರು-ಶಿಷ್ಯರ ಬಾಂಧವ್ಯವನ್ನು ಕಾಣಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮಾತ್ರ ಗುರು ಶಿಷ್ಯರ ಉತ್ತಮ ಬಾಂಧವ್ಯವನ್ನು ಕಾಣಲು ಸಾಧ್ಯವಿರುವುದು. ವಿದ್ಯಾಭ್ಯಾಸ ಕಲಿತ ಹಲವು ದಶಕಗಳ ನಂತರವೂ ತಮಗೆ ಪಾಠ ಕಲಿಸಿದ ಶಿಕ್ಷಕರನ್ನು ನೆನೆದು ಅಭಿನಂದಿಸುವುದು ಮಹಾನ್ ಕೆಲಸ ಎಂದರೆ ತಪ್ಪಾಗಲಾರದು.
ಸರ್ಕಾರಿ ಶಾಲೆಗಳನ್ನು ಉಳಿಸಿ: ಸರ್ಕಾರಿ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ. ಶಿಕ್ಷಣ ಎಂಬುದು ಎಲ್ಲಿ ಮಾರಾಟದ ಕೇಂದ್ರವಾಗಿಬಿಡುತ್ತೆ ಎಂದು ಭಯವಾಗುತ್ತಿದೆ. ಆದಷ್ಟು ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವನ್ನು ಪ್ರತಿಯೊಬ್ಬ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿ ಪಣತೊಡಬೇಕಿದೆ. ಸರ್ಕಾರಿ ಶಾಲೆಗಳ ಉಳಿವು ಸರ್ಕಾರಿ ಶಾಲೆಯಲ್ಲಿ ವಿದ್ಯೆ ಪಡೆದ ವಿದ್ಯಾರ್ಥಿಗಳಿಂದಲೇ ಆಗಬೇಕಿದೆ ಎಂದು ಹಿರಿಯ ವಿದ್ಯಾರ್ಥಿಗಳಿಗೆ ನಿವೃತ್ತ ಶಿಕ್ಷಕ ಎಸ್.ಕೆ.ಹನುಮೇಗೌಡ ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ 15 ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಕಾಲಿಕ ಮರಣಕ್ಕೆ ತುತ್ತಾದ ಶಿಕ್ಷಕರು ಹಾಗೂ 1987-88ನೇ ಬ್ಯಾಚ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಅಗಲಿದ 25 ವಿದ್ಯಾರ್ಥಿಗಳಿಗೆ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸುರೇಶ್, ಜಿ.ಎಸ್.ರೇಣುಕಾ, ಬಿ.ಎನ್.ಭಾರತಿ, ಸುಮಿತ್ರಮ್ಮ, ರಾಜಲಕ್ಷ್ಮೀ, ಶಿವರಾಜು, ಲಕ್ಷ್ಮೀದೇವಮ್ಮ ಇದ್ದರು.