ಮಂಡ್ಯದ ಅಶೋಕನಗರದಲ್ಲಿ ದಿ ರೈಲ್ವೆ ಕೋ ಅಪರೇಟಿವ್ ಬ್ಯಾಂಕ್‌ನ ಮಾಹಿತಿ ಕೇಂದ್ರವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.  
ಮಂಡ್ಯ

ರೈಲ್ವೆ ಕೋ ಅಪರೇಟಿವ್ ಬ್ಯಾಂಕ್‌ಗೆ ಉತ್ತಮ ಹೆಸರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಮಾಹಿತಿ ಕೇಂದ್ರ ಉದ್ಘಾಟನೆ
  • ಬ್ಯಾಂಕ್ ಈಗಾಗಲೇ 700 ಕೋಟಿ ರೂ ಠೇವಣಿ ಹೊಂದಿದೆ
ಮಂಡ್ಯ: ನೂರೈದು ವರ್ಷದ ಇತಿಹಾಸ ಹೊಂದಿರುವ ದಿ ರೈಲ್ವೆ ಕೋ ಅಪರೇಟಿವ್ ಬ್ಯಾಂಕ್‌ಗೆ ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮವೆಂದು ಹೆಸರು ಗಳಿಸಿದೆ ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ಅಶೋಕನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ದಿ ರೈಲ್ವೆ ಕೋ ಅಪರೇಟಿವ್ ಬ್ಯಾಂಕ್‌ನ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರಿಗೆ ಉತ್ತಮ ಬ್ಯಾಂಕಿಂಗ್ ಸೇವೆ ತಲುಪಿಸುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಎಂದರು.
ಬ್ಯಾಂಕ್ ಅಧ್ಯಕ್ಷ ಡಾ.ಎಂ.ಬಿ.ಮಂಜೇಗೌಡ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿಯ ನಿರ್ದೇಶನದಲ್ಲಿ ಬ್ಯಾಂಕ್ ಅನ್ನು ಅತ್ಯುತ್ತಮವನ್ನು ನಿರ್ವಹಿಸುತ್ತಿದ್ದಾರೆ. ಬ್ಯಾಂಕಿನಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರವು ಶೇ.8.75ರಷ್ಟು ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಹೆಚ್ಚಾಗಿ ಬಡ್ಡಿ ದರವನ್ನು ನೀಡುತ್ತಿದೆ. ಜನಸಾಮಾನ್ಯರು, ಸದಸ್ಯರು, ರೈಲ್ವೆ ನೌಕರರು ಮತ್ತು ಗ್ರಾಹಕರಿಗೆ ಆರ್ಥಿಕ ನೆರವು ನೀಡುವ ಮೂಲಕ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ಸಹಕಾರ ಬ್ಯಾಂಕ್ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ದಿ ರೈಲ್ವೆ ಕೋ ಅಪರೇಟಿವ್ ಬ್ಯಾಂಕ್ ನಿಯಮಿತ ಹಲವು ವರ್ಷಗಳಿಂದ ತನ್ನ ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಈಗ ಮಂಡ್ಯದಲ್ಲಿ ಮಾಹಿತಿ ಕೇಂದ್ರ ಆರಂಭಿಸಿರುವುದು ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಪಡೆಯಲು ಇಂತಹ ಶಾಖಾ ಕೇಂದ್ರಗಳು ಬಹಳ ಉಪಯುಕ್ತವಾಗಿವೆ. ಬ್ಯಾಂಕ್ ಈಗಾಗಲೇ 700 ಕೋಟಿ ರೂ ಠೇವಣಿ ಹೊಂದಿದೆ. ಬ್ಯಾಂಕಿನಲ್ಲಿ ಗೃಹಸಾಲವನ್ನು ಸಹ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಕೈಗಾರಿಕಾ ಅಭಿವೃದ್ದಿ ಹಾಗೂ ಉದ್ಯೋಗ ಸೃಷ್ಟಿಗೆ ಹಲವು ಮಹತ್ವದ ಯೋಜನೆ ಜಾರಿಗೆ ತಂದಿದೆ. ಸಹಕಾರ ಬ್ಯಾಂಕ್‌ಗಳೂ ಸಹ ಈ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಡಾ.ಎಸ್.ಆನಂದ, ನಿರ್ದೇಶಕರಾದ ಹನುಮಂತ, ಎಂ.ಬಿ.ಯೋಗಾನಂದ, ಎಸ್.ಮುತ್ತುಕುಮಾರ್, ಆರ್.ಚಂದ್ರಶೇಖರ, ಎಂ.ಯತಿರಾಜು, ಸಿ.ರಾಮನಾದನ್, ಸಿ.ಎಚ್.ಮಂಜುನಾಥ, ಸಿ.ಶಿವಶಂಕರ್, ಎಸ್.ಉತ್ತೇಜ್, ಎಸ್.ಶ್ವೇತಾ, ಸಿ.ನಿರ್ಮಲಾ, ಪಿ.ಚಂದ್ರಶೇಖರ್, ಎನ್.ಎಸ್.ನಂದಕುಮಾರ್, ಸಿಇಒ ಎಸ್.ಜೆ.ನಾರಾಯಣ, ಜನರಲ್ ಮ್ಯಾನೇಜರ್ ಎಂ.ಸಿ.ಲಕ್ಮೀಪ್ರಸಾದ್, ಎಚ್.ಸಿ.ಸತ್ಯನಾರಾಯಣ ಇತರರಿದ್ದರು.