ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಅವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಜ್ಞಾತಂ ಉತ್ಸವದ ವಸ್ತುಪ್ರದರ್ಶನವನ್ನು ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹಾಗೂ ಹಿರಿಯ ವಿಜ್ಞಾನಿ ಡಾ.ಕೆ.ಮುನಿಯಪ್ಪ ಸೇರಿದಂತೆ ಇತರ ಗಣ್ಯರು ಉದ್ಘಾಟಿಸಿದರು. 
ಮಂಡ್ಯ

ತಂತ್ರಜ್ಞಾನದ ಭರಾಟೆಯಲ್ಲಿ ಮೂಲವಿಜ್ಞಾನ ನಿರ್ಲಕ್ಷ್ಯ

ನಾಗಮಂಗಲ: ಇತ್ತೀಚಿನ ಶಿಕ್ಷಣದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದ್ದು ಮೂಲ ವಿಜ್ಞಾನವನ್ನು ನಿರ್ಲಕ್ಷಿಸಲಾಗುತ್ತಿದೆ. ಮೂಲ ವಿಜ್ಞಾನವನ್ನು ಓದುವವರ ಸಂಖ್ಯೆಯೇ ವಿರಳವಾಗುತ್ತಿದ್ದು ಮೂಲ ವಿಜ್ಞಾನಕ್ಕೆ ಯುವ ಸಮೂಹ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕೆಂಗೇರಿಯ ವಿಶ್ವಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಅವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ವಿಜ್ಞಾತಂ ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಂತ್ರಜ್ಞಾನದ ಕೋರ್ಸ್‌ಗಳತ್ತ ಹೆಚ್ಚಿನ ಒಲವು ತೋರುತ್ತಿದ್ದು ವಿಜ್ಞಾನವನ್ನು ನಿರ್ಲಕ್ಷಿಸಲಾಗುತ್ತಿದೆ. ಶಿಕ್ಷಣದ ಜತೆ ಜತೆಗೆ ಮೂಲವಿಜ್ಞಾನಕ್ಕೂ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಜಗತ್ತಿನಲ್ಲಿ ಸಂಶೋಧನೆಗಳು ಹೆಚ್ಚಾಗುತ್ತವೆ. ವಿಜ್ಞಾನವಿಲ್ಲದೆ ತಂತ್ರಜ್ಞಾನವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ. ಜಗತ್ತನ್ನು ಉದ್ದಾರಗೊಳಿಸುವ ಸಂಶೋಧನೆಗಳು ಹೆಚ್ಚಾಗಬೇಕೇ ವಿನಃ ಜಗತ್ತು ಮತ್ತು ಮಾನವ ಕುಲವನ್ನು ನಾಶ ಮಾಡುವಂತಹ ಸಂಶೋಧನೆಗಳನ್ನು ಮಾಡುವ ಆಲೋಚನೆಗಳಿಂದ ದೂರವಿರಬೇಕಿದೆ ಎಂದರು.
ಹಿರಿಯ ವಿಜ್ಞಾನಿ ಡಾ.ಕೆ.ಮುನಿಯಪ್ಪ ಮಾತನಾಡಿ, ವಿಜ್ಞಾನ ನಮ್ಮ ದೈನಂದಿನ ಜೀವನದ ಹೆಜ್ಜೆ ಹಜ್ಜೆಗೂ ನಮ್ಮ ಜತೆಗಿದೆ. ವಿಜ್ಞಾನ ಇಂದು ಪ್ರತಿನಿತ್ಯ ಬೆಳೆಯುತ್ತಿದೆ. ಆದರೆ ಇಂದಿನ ಯುವ ಸಮೂಹ ಅದರ ಪ್ಷೇಕ್ಷಕರಾಗಿರದೆ, ಆವಿಷ್ಕಾರಗಳಲ್ಲಿ ನೀವು ಪಾಲ್ಗೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ.ಶ್ರೀನಿರ್ಮಲನಂದನಾಥ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಚಾಚಾರದ ಬದುಕು ಬೇಡ. ಮೂಲವನ್ನು ನಿರ್ಲಕ್ಷಿಸಿದ ಯಾವುದು ಕೂಡ ಪ್ರಕಾರಗೊಳ್ಳಲು ಸಾಧ್ಯವಿಲ್ಲ. ಕೋತಿಗಳ ಹಂತದಿಂದ ವಿಕಾಸದ ಹಾದಿಯಲ್ಲಿ ಇಂದು ಮನುಷ್ಯರಾಗಿದ್ದೇವೆ ಎಂದರು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾಡು ಕಂಡಂತಹ 19-20ನೇ ಶತಮಾನದ ಅಪ್ರತಿಮ ಸಂತರು, ದಾರ್ಶನಿಕರು, ಶತಮಾನಕೊಬ್ಬ ಶತಪುರುಷರೆಂದರೆ ಶ್ರೀ ಬಾಲಗಂಗಾಧರನಾಥ ಶ್ರೀಗಳು ಎಂದರೆ ತಪ್ಪಾಗಲಾರದು.ಎಂದರು. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿದರು.
ಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಇಂದು: ಫೆ.20ರ ಬೆಳಗ್ಗೆ 10.30ಕ್ಕೆ ಶ್ರೀ ಮಠದ ಬಿಜಿಎಸ್ ಸಭಾ ಭವನದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಅವರ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ. ಇದೇ ಸಂದರ್ಭ ಡಾ.ಎಂ.ಕೆ.ಸೂರಪ್ಪ ಅವರಿಗೆ ‘ವಿಜ್ಞಾತಂ ಪ್ರಶಸ್ತಿ’ ಪ್ರದಾನ ಸಮಾರಂಭ ಕೂಡ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಂಡ್ಯ ಜಿಪಂ ಸಿಇಒ ಕೆ.ಆರ್.ನಂದಿನಿ ಪಾಲ್ಗೊಳ್ಳಲಿದ್ದಾರೆ.