ಆನೆಗೊಳದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮಕ್ಕಳೊಂದಿಗೆ ಕನ್ನಡ ಗೀತೆಗಳನ್ನು ಹಾಡಿದರು. ಗೀತಾ, ರೂಪಾ, ದೇವರಾಜು, ಮಾದಾಪುರ ಸುಬ್ಬಣ್ಣ, ವೆಂಕಟೇಶ್ ಇಸದ್ದರು.
- ಆನೆಗೊಳ ಗ್ರಾಮದ ಆದಿಚುಂಚನಗಿರಿ ಪ್ರೌಢಶಾಲೆ
- ಕನ್ನಡ ಶಾಲೆ, ಪರಿಸರ ಉಳಿಸಿ, ಸುಗಮ ಸಂಗೀತಾ ತರಬೇತಿ ಅಭಿಯಾನ
ಕಿಕ್ಕೇರಿ: ಹೋಬಳಿಯ ಗಡಿಗ್ರಾಮವಾದ ಆನೆಗೊಳ ಗ್ರಾಮದ ಆದಿಚುಂಚನಗಿರಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮೀಣ ಮಕ್ಕಳ ಕನ್ನಡದ ಕಂಠನಾದ ಎಲ್ಲರ ಗಮನ ಸೆಳೆಯಿತು.
ನಾಡಗೀತೆ, ಸುಗಮ ಸಂಗೀತಾ ಶತಮಾನೋತ್ಸವ ಸಂಭ್ರಮದ ನೆನಪಿನಲ್ಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಪಂದನಾ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಶಾಲೆ, ಪರಿಸರ ಉಳಿಸಿ, ಸುಗಮ ಸಂಗೀತಾ ತರಬೇತಿ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ವಿವಿಧ ಶಾಲೆಯ ಮಕ್ಕಳು ನಾಡಗೀತೆ ಹಾಗೂ ವಿವಿಧ ಕನ್ನಡ ಗೀತೆಗಳನ್ನು ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿಯೊಂದಿಗೆ ಹಾಡಿ ಸಂಭ್ರಮಿಸಿದರು.
ಇಲ್ಲಿನ ಅರ್ಪಿತಾ ಕಾನ್ವೆಂಟ್ ಮಕ್ಕಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮುಖವಾಡ ಧರಿಸಿ ಸಂಭ್ರಮಿಸಿದರು. ವಿವಿಧ ಶಾಲೆಯ ಮಕ್ಕಳು ಕನ್ನಡ ಭಾವುಟ ಹಿಡಿದು ಕನ್ನಡದ ಗೀತೆಗಳನ್ನು ಸುಲಲಿತವಾಗಿ ಹಾಡಿದರು.
ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಅನ್ಯಭಾಷೆಯನ್ನು ಜ್ಞಾನಾರ್ಜನೆಗೆ ಕಲಿಯಬೇಕು. ಆದರೆ ತಾಯಿ ಭಾಷೆಯನ್ನು ಮನದ ಭಾಷೆಯಾಗಿ ಸ್ವೀಕರಿಸಬೇಕು ಎಂದ ಅವರು, ಕನ್ನಡ ಶಾಲೆ, ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿ ಆರಂಭವಾಗಿರುವುದು ಆಘಾತಕರ ಬೆಳವಣಿಗೆ. ಶಿಕ್ಷಕರು, ಪಾಲಕರು ಖಾಸಗಿ ಶಾಲೆ ಮೇಲಿನ ವ್ಯಾಮೋಹ ಬಿಡಬೇಕು ಎಂದು ಸಲಹೆ ನೀಡಿದರು.
ನಾಡಗೀತೆ ಅಭಿಯಾನ ಸಂಚಾಲಕ ಮಾದಾಪುರ ಸುಬ್ಬಣ್ಣ ಮಾತನಾಡಿ, ಕನ್ನಡ ಭಾಷೆ ಗಟ್ಟಿಗೊಳ್ಳಬೇಕಾದರೆ ಕನ್ನಡದ ವಾತಾವರಣವಾಗಬೇಕಿದೆ ಎಂದು ಆಶಿಸಿದರು.
ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆದಿಚುಂಚನಗಿರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರ್ಪಿತ ಕಾನ್ವೆಂಟ್ ಮುಖ್ಯಸ್ಥರಿಗೆ ಪ್ರಶಾಂಸನಾರ್ಹ ಪತ್ರ, ಫಲಕ, ಗಿಡ ನೀಡುವ ಮೂಲಕ ಗೌರವಿಸಲಾಯಿತು. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹಲವು ಗೀತೆಗಳನ್ನು ಮಕ್ಕಳಿಗೆ ಹೇಳಿಕೊಟ್ಟು ಮಧುರವಾಗಿ ಹಾಡಿಸಿ ಕನ್ನಡದ ಮನಸನ್ನು ಗಟ್ಟಿಗೊಳಿಸಿದರು.
ಮುಖ್ಯಶಿಕ್ಷಕರಾದ ಎಚ್.ಆರ್.ಗೀತಾ, ಎಸ್.ಬಿ.ರೂಪಾ, ದೇವರಾಜು, ಶಿಕ್ಷಕರಾದ ಪ್ರಕಾಶ್ ಮೇನಾಗರ, ಪುರುಷೋತ್ತಮ್, ರಂಗಸ್ವಾಮಿ, ಕೋದಂಡರಾಮು, ಸುಮಾ, ತೇಜಸ್ವಿನಿ, ಶಿಲ್ಪಾ, ಚೈತ್ರಾ, ಪವಿತ್ರಾ, ಭಾನು, ಅರ್ಪಿತಾ ಮತ್ತಿತರರಿದ್ದರು.