ಪಾಂಡವಪುರ ತಾಲೂಕಿನ ಚಿನಕುರಳಿ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ವಿದ್ಯೆಕೊಟ್ಟ ಗುರುಗಳನ್ನು ಸ್ಮರಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ತಿಮ್ಮೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಚಿನಕುರಳಿಯ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ 1990 ರಿಂದ 2001 ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸ್ವಯಂ ಉದ್ಯೋಗಿಗಳಾಗಿ, ಕೃಷಿಕರಾಗಿ, ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಹೆಣ್ಣು ಮಕ್ಕಳು ಗೃಹಿಣಿಯರಾಗಿ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಇವರನ್ನೆಲ್ಲಾ ಮತ್ತೆ ನೋಡುವ ಅವಕಾಶ ನಮಗೆ ಮತ್ತೆ ಸಿಕ್ಕಿದ್ದು ಸಂತೋಷದ ವಿಚಾರ ಎಂದರು.
ಉಪನ್ಯಾಸಕ ಮಂಜುನಾಥ್ ಮಾತನಾಡಿ, ಸುದ್ದಿ ಮಾಧ್ಯಮಗಳು ಪ್ರವರ್ಧಮಾನಕ್ಕೆ ಬಂದಿರುವ ಇಂದಿನ ಕಾಲಘಟ್ಟದಲ್ಲಿ ಗುರುವಂದನ, ಸ್ನೇಹಸಮ್ಮಿಲನ ಕಾರ್ಯಕ್ರಮಗಳ ಸಂಖ್ಯೆಯೂ ಹೆಚ್ಚಾಗಿದೆ. ಇದು ಉತ್ತಮ ಬೆಳವಣಿಗೆ. ನಾವು ಜೀವನದಲ್ಲಿ ಏನು ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ, ಎಷ್ಟು ಪ್ರಾಮಾಣಿಕವಾಗಿದ್ದೇವೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ನಡೆದರೆ ಅದುವೇ ಗುರುಗಳಿಗೆ ನಾವು ನೀಡುವ ಗೌರವ ಎಂದು ತಿಳಿಸಿದರು.
ಶಿಕ್ಷಕರು, ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು ಮಾತನಾಡಿದರು.
ಶಿಕ್ಷಕರಾದ ಕೆ.ಎಸ್.ಮುರುಳಿಧರ್, ಮಲ್ಲಣ್ಣ, ಎಸ್.ಕೆ.ಪ್ರಭಾಕರ್, ಟಿ.ಕಾಂತಾ, ತಿಮ್ಮೇಗೌಡ, ಡಿ.ಮಂಜುನಾಥ್, ಮಾದೇಗೌಡ, ಟಿ.ಪಿ.ಮೋಹನ್, ಅನಂತರಾಜ್ ಅರಸು, ನಿಂಗೇಗೌಡ, ಬಿ.ರಾಮು, ನಾರಾಯಣಗೌಡ, ಕೆಂಪೂ, ಸಿದ್ದೇಗೌಡ, ನಾಗಮ್ಮ, ಸಣ್ಣೇಗೌಡ, ಸರಸ್ವತಿ, ಜಯಶ್ರೀ ಅವರನ್ನು ಅಭಿನಂದಿಸಲಾಯಿತು.
ಕೆ.ಎಸ್.ಬೋರೇಗೌಡ, ಸಿ.ಆರ್.ಸತೀಶ್, ಮುರುಳಿ ಸೇರಿದಂತೆ ಎಲ್ಲ ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.