ಕ್ಷೇತ್ರಪಾಲಕ ಶ್ರೀಆದಿರಂಗನಾಥಸ್ವಾಮಿ ದೇವರು.  
ಮಂಡ್ಯ

ವಿಜೃಂಭಣೆಯ ರಂಗಮುಡಿ ಉತ್ಸವ ಇಂದು

ಶ್ರೀರಂಗಪಟ್ಟಣ: ಕ್ಷೇತ್ರಪಾಲಕ ಶ್ರೀ ಆದಿರಂಗನಾಥಸ್ವಾಮಿಗೆ 2026ನೇ ಸಾಲಿನ ಶ್ರೀರಂಗಮುಡಿ ಉತ್ಸವ ಶ್ರೀರಂಗಮುಡಿ ಸಮಿತಿ ವತಿಯಿಂದ ಆಸ್ತಿಕ ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ತಿಳಿಸಿದ್ದಾರೆ.
ಪಟ್ಟಣದ ಐತಿಹಾಸಿಕ ದೇವಾಲಯದಲ್ಲಿ ಮೇಷ ಮಾಸ ಶುಕ್ಲಪಕ್ಷ ಸಪ್ತಮಿ ದಿನದಂದು ಶ್ರೀ ಗೌತಮ ಋಷಿಗಳಿಗೆ ಶ್ರೀರಂಗನಾಥಸ್ವಾಮಿ ದರ್ಶನ ನೀಡಿದ ರಂಗಜಯಂತಿ ಪ್ರಯುಕ್ತ ಗುರುವಾರ ಬೆಳಗ್ಗೆಯಿಂದಲೇ ವೈದಿಕರು ಆದಿಶೇಷ ಸ್ವರೂಪಿ ಶ್ರೀರಂಗನಾಥಸ್ವಾಮಿಯ ಸಾಲಿಗ್ರಾಮ ಮೂರ್ತಿಗೆ ವಿವಿಧ ಅಭಿಷೇಕ ನೆರವೇರಿಸಿ ಮಹಾಮಂಗಳಾರತಿ ಅರ್ಪಿಸಿ ವರ್ಷಕ್ಕೆ 3 ಬಾರಿ ಮಾತ್ರ ಸಿಗುವ ನಿಜಪಾದ ದರ್ಶನದೊಂದಿಗೆ ದೇವರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು.
ದೇವಾಲಯದಲ್ಲಿ ಮಧ್ಯಾಹ್ನ ಸಹಸ್ರಾರು ಭಕ್ತರಿಗಾಗಿ ಪ್ರಸಾದ ವಿನಿಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ. ಇವುಗಳ ಬಳಿಕ ಸಂಜೆ ಸಂಪ್ರದಾಯ ಪೂಜೆಗಳ ಬಳಿಕ ಸರ್ಕಾರಿ ಖಜಾನೆಯಿಂದ ತರಲಾಗುವ ರತ್ನಖಚಿತ ಮುತ್ತು ನವರತ್ನಗಳ ಹಾರದ ಒಡವೆಗಳನ್ನು ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಸಮೇತ ವೈನತೇಯಸ್ವಾಮಿಯ ಮೇಲೆ ಆಸೀನರಾದ ಶ್ರೀರಂಗನಾಥಸ್ವಾಮಿಯ ಪಂಚಲೋಹದ ವಿಶೇಷ ಮೂರ್ತಿಗೆ ವಜ್ರದ ಕಿರೀಟ ಧಾರಣೆ ಮೂಲಕ ವಿಶೇಷ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ರಾಜಬೀದಿಗಳಲ್ಲಿ ಮಂಗಳವಾದ್ಯಗಳ ಸಮೇತ ವಿಜೃಂಭಣೆಯ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.