ಕಿಕ್ಕೇರಿ ಹೋಬಳಿಯ ಬೋಳಮಾರನಹಳ್ಳಿ ಗ್ರಾಮದಲ್ಲಿ ಲಕ್ಷ್ಮೀದೇವಿಯನ್ನು ವಿಶೇಷವಾಗಿ ಅಲಂಕರಿಸಿರುವುದು. 
ಮಂಡ್ಯ

ವಿಜೃಂಭಣೆಯ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • ಬೋಳಮಾರನಹಳ್ಳಿ
  • ಭಕ್ತರು ಜಾಗರಣೆ ಇದ್ದು ದೇವಿಯನ್ನು ಪೂಜಿಸಿದರು
ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಗ್ರಾಮವಾದ ಬೋಳಮಾರನಹಳ್ಳಿಯಲ್ಲಿ ಗ್ರಾಮದೇವತೆ ಲಕ್ಷ್ಮೀದೇವಿ ಅಮ್ಮನವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಬುಧವಾರ ರಾತ್ರಿ ವಿಧ್ಯುಕ್ತವಾಗಿ ಆರಂಭವಾದ ವಿವಿಧ ಪೂಜೆಗಳು ಗುರುವಾರ ಮುಂಜಾನೆಯವರೆಗೂ ನೆರವೇರಿತು. ಇಡೀ ದಿನ ರಾತ್ರಿ ಭಕ್ತರು ಜಾಗರಣೆ ಇದ್ದು ದೇವಿಯನ್ನು ಪೂಜಿಸಿದರು. ಮುಂಜಾನೆ ದೇವಿಯ ಮೂಲಗುಡಿಗೆ ತೆರಳಿ ಹೂವು, ಹಣ್ಣು, ಕಾಯಿ ಅರ್ಪಿಸಿ ಭಕ್ತಿ ಮೆರೆದರು. ಸಂಜೆ ದೇವಿಯ ಉತ್ಸವಮೂರ್ತಿಯನ್ನು ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಿ, ಆಭರಣ, ರೇಷ್ಮೆ ವಸ್ತ್ರ ತೊಡಿಸಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಗ್ರಾಮದ ಪ್ರತಿ ಬೀದಿಯಲ್ಲಿನ ತಳಿರು ತೋರಣ, ಚಿತ್ತಾಕರ್ಷಕ ರಂಗವಲ್ಲಿ ಗಮನ ಸೆಳೆಯಿತು. ದೇವಿಯ ಮೆರವಣಿಗೆಗಾಗಿ ಕಾದು ಕುಳಿತಿದ್ದ ಗ್ರಾಮಸ್ಥರು ಮನೆ ಮುಂದೆ ದೇವಿ ಉತ್ಸವ ಬಂದ ಕೂಡಲೇ ಸಂಭ್ರಮದಿಂದ ಜೈಕಾರ ಹಾಕಿದರು.
ದೇವಿ ಮೂರ್ತಿಯನ್ನು ರಂಗಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ತಡರಾತ್ರಿಯವರೆಗೂ ದೇವಿಯ ರಂಗಮಂಟಪದ ಬಳಿ ಗ್ರಾಮಸ್ಥರು ರಂಗಕುಣಿತ ಪ್ರದರ್ಶಿಸಿದರು. ದೇವಿಯ ಗುಡಿಯಲ್ಲಿ ಹೊಸ ಗಡಿಗೆಗೆ(ಕಳಸ) ಗಂಗಾಜಲ ತುಂಬಿ ಹೊಂಬಾಳೆ ಇಟ್ಟು ಪೂಜಿಸಿದ ಬಳಿಕ ಹೊಂಬಾಳೆ ಕಳಸ ಹೊತ್ತ ಬಾಲಕಿ ಮೆರವಣಿಗೆಯಲ್ಲಿ ಹಿಮ್ಮುಖವಾಗಿ ಸಾಗಿದಳು. ದೇವಿ ಮುಂದೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ನೆರವೇರಿತು.
ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಸಮಿತಿ, ಶಂಭುಲಿಂಗೇಶ್ವರ ಜಾತ್ರಾ ಸಮಿತಿ ಸದಸ್ಯರು, ರಾಜ್ಯ ಸಹಕಾರ ಮಾರಾಟ ಮಂಡಳ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕಿರಣ್, ಜಯದೇವ ಶಿವಲಿಂಗೇಗೌಡ, ಬಿ.ಎಸ್. ಮಂಜುನಾಥ್, ಶೇಖರ್, ಚಿಕ್ಕಲಿಂಗೇಗೌಡ, ಪುಟ್ಟೇಗೌಡ, ಶ್ರೀನಿವಾಸ್, ನರಸೇಗೌಡ, ಅಣ್ಣಾಸ್ವಾಮಿ, ಪದ್ಮನಾಭೇಗೌಡ, ಶಂಕರಲಿಂಗೇಗೌಡ, ಬಸವಣ್ಣ, ಚಂದ್ರಶೇಖರ್ ಹಾಜರಿದ್ದರು.