ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಶ್ರೀ ತೋಪಿನ ತಿಮ್ಮಪ್ಪಸ್ವಾಮಿ ಹರಿಸೇವಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ತಾವರೆ ಎಲೆಯಲ್ಲಿ ಊಟ ಮಾಡಿದರು. 
ಮಂಡ್ಯ

ಸಂಭ್ರಮದ ಶ್ರೀ ತೋಪಿನ ತಿಮ್ಮಪ್ಪಸ್ವಾಮಿ ಹರಿಸೇವೆ

ಪ್ರಮುಖ ಮುಖ್ಯಾಂಶಗಳು

  • 1ಲಕ್ಷ ಭಕ್ತರಿಗೆ ತಾವರೆ ಎಲ್ಲೆಯಲ್ಲೇ ಅನ್ನಸಂತರ್ಪಣೆ
ಮದ್ದೂರು: ರಾಜ್ಯದಲ್ಲೇ ವಿಶಿಷ್ಟ ಆಚರಣೆಯಿಂದ ಹೆಸರಾಗಿರುವ ಆಬಲವಾಡಿ ಗ್ರಾಮದ ಶ್ರೀ ತೋಪಿನ ತಿಮ್ಮಪ್ಪಸ್ವಾಮಿ (ಶ್ರೀ ವೆಂಕಟರಮಣ ಸ್ವಾಮಿ) ಹರಿಸೇವಾ ಮಹೋತ್ಸವ ಭಾನುವಾರ ಸಂಭ್ರಮದಿಂದ ನೆರವೇರಿತು.
ಸುಮಾರು 850 ವರ್ಷಗಳ ಇತಿಹಾಸ ಹೊಂದಿರುವ ಹರಿಸೇವೆಗೆ ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 1ಲಕ್ಷ ಭಕ್ತರು ಆಗಮಿಸಿದ್ದರು. ಎಲ್ಲ ಭಕ್ತರಿಗೆ ತಾವರೆ ಎಲೆಯಲ್ಲೇ ಅನ್ನಸಂತರ್ಪಣೆ ಮಾಡಲಾಯಿತು. ಗ್ರಾಮಸ್ಥರೇ ಕೊಪ್ಪರಿಕೆಗಳಲ್ಲಿ ಪ್ರಸಾದ ತಯಾರಿಸಿ ಟ್ಯಾಂಕರ್, ಟ್ರ್ಯಾಕ್ಟರ್‌ಗಳ ಮೂಲಕ ತಂದು ಭಕ್ತರಿಗೆ ಬಡಿಸುತ್ತಾರೆ. ಕೊಪ್ಪರಿಕೆಗಳಲ್ಲಿ ಬರೋಬ್ಬರಿ 150 ಕ್ವಿಂಟಾಲ್ ಅಕ್ಕಿ, 35 ಹಂಡೆ ಸಾಂಬರ್ ತಯಾರಿಸಲಾಗಿತ್ತು.
ತೋಪಿನ ತಿಮ್ಮಪ್ಪ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಆಷಾಢ ಮಾಸದ ಹಿನ್ನೆಲೆಯಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ ಅದ್ದೂರಿಯಾಗಿ ನಡೆಯಿತು. ಉತ್ಸವಕ್ಕಾಗಿ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸುತ್ತ್ತಲಿನ ಗ್ರಾಮಸ್ಥರು ದೇವರಿಗೆ ಪೂಜೆ ಸಲ್ಲಿಸಿದರು. ತೋಪಿನ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬಂದಿತ್ತು ಎಂದರು.
ಹರಿ ಸೇವೆಗೆ ಗ್ರಾಮದ ಪ್ರತಿ ಮನೆಯಿಂದ 10 ಸೇರು ಅಕ್ಕಿ, 2 ಸೇರು ಬೇಳೆ, ಹುಣಸೆ ಹಣ್ಣು, ಕುಂಬಳಕಾಯಿ, ಸೌದೆ, ತೆಂಗಿನಕಾಯಿ, ಬೆಲ್ಲ, ಆರ್ಥಿಕ ಸಹಾಯ ಹಾಗೂ ಹರಕೆ ತೀರಿಸಲು 1 ಕಟ್ಟು ತಾವರೆ ಎಲೆ ಸೇರಿದಂತೆ ಇನ್ನಿತರರ ವಸ್ತುಗಳನ್ನು ಕೊಡುವುದು ವಾಡಿಕೆ.
ಶನಿವಾರ ಮಧ್ಯಾಹ್ನ 1 ಗಂಟೆಗೆ ಮಿಸಲು ನೀರು ತರುವುದು, ಮಧ್ಯಾಹ್ನ 2 ಗಂಟೆಗೆ ತಲೆಮುಡಿ, ಸಂಜೆ 3 ಗಂಟೆಗೆ ಮಹಾಮಂಗಳಾರತಿ, ರಾತ್ರಿ 6 ಗಂಟೆಗೆ ಬಂಡಿ ಮೆರವಣಿಗೆ, ರಾತ್ರಿ 12 ಗಂಟೆಗೆ ಬಾಯಿಬೀಗ ಮತ್ತು ಜವಳಿ ಕುಣಿತ, ಸೋಮನ ಕುಣಿತ. ಮಂಗಳವಾದ್ಯ ಮದ್ದಿನ ತಮಾಷೆ ಮತ್ತು ತಮಟೆಗಳೊಂದಿಗೆ ಶ್ರೀ ತೋಪಿನ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ, ಶ್ರೀ ಬಂಕದಕಟ್ಟಮ್ಮ, ಶ್ರೀ ಮದನಟ್ಟಮ್ಮ ದೇವರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಶನಿವಾರ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವು ಗಣ್ಯರು ಪೂಜೆಯಲ್ಲಿ ಭಾಗವಹಿಸಿದ್ದರು.
ತೋಪಿನ ತಿಮ್ಮಪ್ಪ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ರವೀಂದ್ರ, ಉಪಾಧ್ಯಕ್ಷ ಚಿಕ್ಕೊನು, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಸುರೇಶ್, ಮುಖಂಡರಾದ ಗೋವಿಂದು, ರಮೇಶ್, ಜಯರಾಮು, ವೀರಣ್ಣ, ಜಯಣ್ಣ, ಚಿಕ್ಕೊನು, ತಿಮ್ಮಯ್ಯ ಇತರರಿದ್ದರು.