ಕಾಂಗ್ರೆಸ್‌ನ ಕಿಸಾನ್ ಘಟಕದ ಪಾಂಡವಪುರ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ನೇತೃತ್ವದಲ್ಲಿ ಎಂಆರ್‌ಎನ್ ಶುಗರ್ಸ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. 
ಮಂಡ್ಯ

ಸರ್ಕಾರ ಘೋಷಿಸಿರುವ ಪ್ರೋತ್ಸಾಹ ಧನ ರೈತರಿಗೆ ಪಾವತಿಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ಒತ್ತಾಯ
ಪಾಂಡವಪುರ: ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಶುಗರ್ಸ್ ಆಡಳಿತ ಮಂಡಳಿ ಸರ್ಕಾರ ಘೋಷಣೆ ಮಾಡಿರುವ 50 ರೂ.ಗಳ ಪ್ರೋತ್ಸಾಹ ಧನವನ್ನು ಶೀಘ್ರ ಪಾವತಿಸಬೇಕು. ಇಲ್ಲವಾದರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡದಂತೆ ನಿರ್ಣಯ ಕೈಗೊಂಡು, ಕಾರ್ಖಾನೆಗೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ಎಚ್ಚರಿಸಿದರು.
ಪಿಎಸ್‌ಎಸ್‌ಕೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಎಂಆರ್‌ಎನ್ ಶುಗರ್ಸ್ ಸೇರಿದಂತೆ ಜಿಲ್ಲೆಯ ಇತರ ಖಾಸಗಿ ಕಾರ್ಖಾನೆಗಳ ಆಡಳಿತ ಮಂಡಳಿ ಸರ್ಕಾರದ ಆದೇಶಕ್ಕೆ ಮನ್ನಣೆ ನೀಡುತ್ತಿಲ್ಲ. ಆ ಮೂಲಕ ರೈತರಿಗೆ ದ್ರೋಹ ಮಾಡುತ್ತಿವೆ. ಒಂದು ವೇಳೆ ಕಬ್ಬು ಸರಬರಾಜು ಮಾಡಿದರೂ ಆಡಳಿತ ಮಂಡಳಿ 50 ರೂ. ನೀಡುವುದಿಲ್ಲ. ಹೀಗಾಗಿ ಕಬ್ಬು ಸರಬರಾಜು ಮಾಡುವುದಕ್ಕೂ ಮೊದಲು ಪ್ರೋತಾಹ ಧನ ಪಾವತಿಸಬೇಕು. ಒಂದು ವೇಳೆ ಹಣ ಕೊಡದಿದ್ದರೆ ಯಾವುದೇ ಕಾರಣಕ್ಕೂ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡದಂತೆ ರೈತರಲ್ಲಿ ಮನವಿ ಮಾಡಲಾಗುವುದು ಎಂದರು.
ಮಂಡ್ಯದ ಮೈಶುಗರ್ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ 50 ರೂ.ಪ್ರೋತ್ಸಾಹ ಧನ ನೀಡಿದೆ. ಆದರೆ ಖಾಸಗಿ ಕಾರ್ಖಾನೆಗಳು ಸರ್ಕಾರದ ಆದೇಶ ಪಾಲಿಸಿಲ್ಲ. ಹೀಗಾಗಿ ಪ್ರೋತ್ಸಾಹ ಧನ ನೀಡುವವರೆಗೂ ಕಬ್ಬು ಬೆಳೆಗಾರರು ತಮ್ಮ ವ್ಯಾಪ್ತಿಯ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಬಾರದು ಎಂದರು.
ಜು.15ರಿಂದ ಕಬ್ಬು ಅರೆಯುವಿಕೆಯನ್ನು ಕಡ್ಡಾಯವಾಗಿ ಆರಂಭಿಸಬೇಕೆಂದು ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಸರ್ಕಾರದ ಹಣಕಾಸಿನ ನೆರವು ಪಡೆಯದೆ ಮೈಶುಗರ್ ಕಾರ್ಖಾನೆ ತನ್ನ ಅನುದಾನದಲ್ಲೇ ರೈತರಿಗೆ 50 ರೂ.ಪಾವತಿಸಿದೆ. ಕಬ್ಬಿನ 50 ರೂ. ಬಾಕಿ ಪಡೆಯುವವರೆಗೂ ಯಾರೂ ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಸರಬರಾಜು ಮಾಡಬೇಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಾಗಿ ಎರಡು ದಿನಗಳಲ್ಲಿ 50ರೂ. ಪ್ರೊತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ತಾಲೂಕು ಅಧ್ಯಕ್ಷ ಸತ್ಯೇಂದ್ರಕುಮಾರ್, ಎಸ್ಸಿ-ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಹರಳಹಳ್ಳಿ ಸಿದ್ದಲಿಂಗಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮಾಜಿ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡ ಅಂತನಹಳ್ಳಿ ಬಸವರಾಜು, ರೈತಸಂಘದ ಮುಖಂಡರಾದ ಸಿ.ಕೆ.ಪುಟ್ಟೇಗೌಡ, ನಾಗೇಶ್ ಇತರರು ಇದ್ದರು.