ಮದ್ದೂರು ತಾಲೂಕಿ ಹೊಟ್ಟೇಗೌಡನದೊಡ್ಡಿಯಲ್ಲಿರುವ ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಸ್ಥಾನದ ಹೊರ ನೋಟ. 
ಮಂಡ್ಯ

ಜಿನ್ನಾಗರದಮ್ಮ ಮಹಿಮೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಿ ದೇವಸ್ಥಾನ
  • ಹೊಟ್ಟೇಗೌಡನದೊಡ್ಡಿ ಗ್ರಾಮ
ಮದ್ದೂರು: ಮನೆ ನಿರ್ಮಾಣವಾಗಬೇಕಿದ್ದ ಸ್ಥಳದಲ್ಲಿ ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಿ ದೇವಸ್ಥಾನ ನಿರ್ಮಾಣವಾಗಿ ಇದೀಗ ಅದು ಪುಣ್ಯ ಕ್ಷೇತ್ರವಾಗಿದ್ದು, ಇದು ಆಶ್ಚರ್ಯವೆನಿಸಿದರೂ ಸತ್ಯ ಸಂಗತಿ.
ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದ ಸುಂದರ ಪರಿಸರದಲ್ಲಿ ನೆಲೆಗೊಂಡಿರುವ ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಆರಾಧ್ಯ ದೇವಿಯಾಗಿ ನೆಲೆಸಿದ್ದಾಳೆ. ದೇಗುಲಕ್ಕೆ ಆಗಮಿಸಿ ಶ್ರದ್ಧಾ-ಭಕ್ತಿಯಿಂದ ಪೂಜಿ ಸಲ್ಲಿಸಿದರೆ ವಿವಾಹವಾಗದವರಿಗೆ ವಿವಾಹ, ಸಂತಾನ ಪ್ರಾಪ್ತಿ, ವ್ಯಾಪಾರದಲ್ಲಿ ಲಾಭ ಸೇರಿದಂತೆ ಜೀವನದಲ್ಲಿ ಅಂದುಕೊಂಡ ಎಲ್ಲ ಇಷ್ಟಾರ್ಥಗಳೂ ಇಲ್ಲಿ ಈಡೇರುತ್ತದೆ. ಇದರೊಂದಿಗೆ ಕಷ್ಟಗಳು ಮಂಜಿನಂತೆ ಕರಗಿ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸುತ್ತದೆ ಎಂಬುದು ಭಕ್ತರ ನಂಬಿಕೆ.
ತಾಲೂಕಿನ ಹೊಟ್ಟೇಗೌಡನದೊಡ್ಡಿ, ನಿಡಘಟ್ಟ, ಹುಣಸೇಮರದೊಡ್ಡಿ, ಗೌಡಗೆರೆ ಸೇರಿದಂತೆ ಮಂಡ್ಯ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಅಪಾರವಾದ ಭಕ್ತ ಸಮೂಹವಿದೆ. ದೇಗುಲಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡು ಹೋದವರು ಹರಕೆ ಈಡೇರಿದ ನಂತರ ದೇಗುಲಕ್ಕೆ ಆಗಮಿಸಿ ಹೂವಿನ ಅಲಂಕಾರ, ಪಂಚಾಮೃತ ಅಭಿಷೇಕ, ಅನ್ನ ಸಂತರ್ಪಣೆ ಸೇರಿದಂತೆ ಶಕ್ತಿಯಾನುಸಾರ ದೇವಿಯ ಸೇವೆ ಮಾಡುವುದು ಇಂದಿಗೂ ರೂಢಿಯಲ್ಲಿದೆ.
ಮಹಿಳೆಯರು ಸತತ 9 ವಾರಗಳ ಕಾಲ ದೇಗುಲಕ್ಕೆ ಆಗಮಿಸಿ ದೇವಿಗೆ ಮಡಿಲಕ್ಕಿ, ಸೀರೆ, ರವಕೆ ಕಣ, ಹೂವು, ಅರಿಶಿಣ ಕುಂಕುಮ ನೀಡಿದರೆ ಇಷ್ಟಾರ್ಥ ಈಡೇರುತ್ತದೆ ಎಂಬುವುದು ಮಹಿಳಾ ಭಕ್ತರ ನಂಬಿಕೆ. ಅಲ್ಲದೆ ದೇವಿಗೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ.
ಹೂ ಕೊಡುವ ದೇವಿ: ದೇಗುಲದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಲಿದ್ದು, ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತದೆ. ಈ ದಿನಗಳಲ್ಲಿ ದೇವಿ ಬಲ ಭಾಗದಿಂದ ಹೂವು ನೀಡಿದರೆ ಭಕ್ತರ ಇಷ್ಟಾರ್ಥ ಈಡೇರುತ್ತದೆ ಎಂಬುದು ಬಲವಾದ ನಂಬಿಕೆ.
ಜಾತ್ರಾ ಮಹೋತ್ಸವ: ಯುಗಾದಿ ಸಂದರ್ಭದಲ್ಲಿ ದೇಗುಲದಲ್ಲಿ 2 ದಿನಗಳ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ದೇಗುಲಕ್ಕೆ ವಿದ್ಯುತ್ ದೀಪಾಂಲಕಾರ ಹಾಗೂ ವಿವಿಧ ಬಗೆಯ ಹೂವುಗಳಿಂದ ಸಿಂಗಾರ ಮಾಡಲಾಗುತ್ತದೆ. ಹೋವ, ಹವನ, ಮಹಾ ಮಂಗಳಾರತಿ ಮಾಡಲಾಗುತ್ತದೆ. ಹೊಟ್ಟೇಗೌಡನದೊಡ್ಡಿ ಗ್ರಾಮದಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಹೂ ಹೊಂಬಾಳೆ ಸಹಿತ ದೇಗುಲಕ್ಕೆ ಆಗಮಿಸುತ್ತಾರೆ. ಈ ವೇಳೆ ವಿಶೇಷ ಪೂಜೆ, ಅನ್ನಸಂತರ್ಪಣೆ ಸೇರಿದಂತೆ ಧಾರ್ಮಿಕ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುವುದು ವಿಶೇಷ. ದೇಗುಲದಲ್ಲಿ ಕಾರ್ತಿಕ ಮಾಸ, ಶ್ರಾವಣ ಮಾಸ, ಸಂಕ್ರಾಂತಿ, ಯುಗಾದಿ, ಅಮಾವಾಸ್ಯೆ, ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ವಿವಿಧ ರೀತಿಯ ಪೂಜಾ ಕಾರ್ಯಕ್ರಮ ನೆರವೇರಲಿದೆ.
ದೇಗುಲದ ಐತಿಹ್ಯ: ಹೊಟ್ಟೇಗೌಡನದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿರುವ ಜಿನ್ನಾಗರದಮ್ಮ ದೊಡ್ಡಮ್ಮ ದೇವಿ ಭಕ್ತರು ಮೊದಲು ಕೌಡ್ಲೆ ಸಮೀಪದ ಜಿನ್ನಾಗರದಲ್ಲಿರುವ ದೊಡ್ಡಮ್ಮದೇವಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಬರುವುದು ವಾಡಿಕೆ. ಈ ಮಧ್ಯೆ ಹೊಟ್ಟೇಗೌಡನದೊಡ್ಡಿ ಗ್ರಾಮದ ಕೆಂಪೇಗೌಡರ ಪುತ್ರ ಪ್ರವೀಣ್‌ಕುಮಾರ್ ಅವರು ತಮ್ಮ ಜಮೀನಿನಲ್ಲಿ ಮನೆ ಕಟ್ಟಲು ಆರಂಭ ಮಾಡುತ್ತಾರೆ. ಈ ವೇಳೆ ಪ್ರವೀಣ್‌ಕುಮಾರ್ ಅವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದ ಸಂದರ್ಭ ಹುತ್ತ ಸ್ವಯಂ ಉದ್ಭವಾಗುತ್ತದೆ.
ಇದರಿಂದ ಗಾಬರಿಗೊಂಡ ಪ್ರವೀಣ್‌ಕುಮಾರ್ ಕುಟುಂಬದವರು ಜ್ಯೋತಿಷಿಗಳ ಬಳಿ ಶಾಸ್ತ್ರ ಕೇಳಿದಾಗ,. ನೀವು ಮನೆ ಕಟ್ಟುತ್ತಿರುವ ಸ್ಥಳದಲ್ಲಿ ಮನೆ ಬದಲಿಗೆ ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಿ ದೇಗುಲ ನಿರ್ಮಿಸಿ ದೇವಿ ಪ್ರತಿಷ್ಠಾಪಿಸಿ ಪೂಜೆ ಮಾಡುವಂತೆ ತಿಳಿಸುತ್ತಾರೆ. ನಂತರ ಗ್ರಾಮಸ್ಥರು, ಭಕ್ತರು, ದಾನಿಗಳ ಸಹಾಯದಿಂದ ದೇಗುಲ ನಿರ್ಮಾಣ ಮಾಡಿ ದೇವಿಯ ಆಶಯದಂತೆ ಪೂಜೆ ಆರಂಭವಾಗುತ್ತದೆ.
ಮಾರ್ಗ: ಮದ್ದೂರಿನಿಂದ ನಿಡಘಟ್ಟ ಮಾರ್ಗವಾಗಿ 9 ಕಿ.ಮೀ., ಚನ್ನಪಟ್ಟಣದಿಂದ ನಿಡಘಟ್ಟ ಮಾರ್ಗವಾಗಿ 14 ಕಿ.ಮೀ. ಹಾಗೂ ಬೆಸಗರಹಳ್ಳಿಯಿಂದ ನಿಡಘಟ್ಟ ಮಾರ್ಗವಾಗಿ 10 ಕಿ.ಮೀ.ದೂರ ಕ್ರಮಿಸಿದರೆ ದೇಗುಲ ಸಿಗಲಿದೆ.
ಮದ್ದೂರು ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿರುವ ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಿಯನ್ನು ಶ್ರದ್ಧಾ-ಭಕ್ತಿಯಿಂದ ಪೂಜೆಸಿದರೆ ಭಕ್ತರಇಷ್ಟಾರ್ಥಗಳನ್ನು ಈಡೇರುತ್ತದೆ. ಆದ್ದರಿಂದ ದೇವಿಗೆ ರಾಜ್ಯಾದ್ಯಂತ ಅಸಂಖ್ಯಾತ ಭಕ್ತ ವೃಂದವೇ ಇದೆ.
ಪ್ರವೀಣ್‌ಕುಮಾರ್ ಪ್ರಧಾನ ಅರ್ಚಕ, ಹೊಟ್ಟೇಗೌಡನದೊಡ್ಡಿ
ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಿ ನನ್ನ ಮನೆ ದೇವರು. ಇಡೀ ಕುಟುಂಬ ದೇವಿಯ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು, ಇದರಿಂದ ನಮ್ಮ ಇಷ್ಟಾರ್ಥಗಳು ಈಡೇರುವ ಜತೆಗೆ ಜೀವನ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸಿದೆ.
ಎನ್.ಎಂ.ಪ್ರಕಾಶ್ ಭಕ್ತ, ನಿಡಘಟ್ಟ
ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಿ ಸುಂದರ ಪರಿಸರ ಮಧ್ಯೆ ಇರುವುದರಿಂದ ದೇಗುಲಕ್ಕೆ ಬಂದರೆ ಮನಸಿಗೆ ಒಂದು ರೀತಿಯ ಉಲ್ಲಾಸವಾಗುತ್ತದೆ. ಇದರೊಂದಿಗೆ ದೇವಿಯನ್ನು ಮನಸಿನಲ್ಲಿ ನೆನೆದರೆ ಇಷ್ಟಾರ್ಥಗಳು ಈಡೇರುತ್ತದೆ.
ನಾಗೇಶ್ ಭಕ್ತ, ಹೊಟ್ಟೇಗೌಡನದೊಡ್ಡಿ
ದೇವರನ್ನು ನಂಬಿದರೆ ಎಂದಿಗೂ ಕೈ ಬಿಡುವುದಿಲ್ಲ. ಅದೇ ರೀತಿಯಲ್ಲಿ ಶ್ರೀ ಜಿನ್ನಾಗರದಮ್ಮ ದೊಡ್ಡಮ್ಮ ದೇವಿಯನ್ನು ಸ್ಮರಣೆ ಮಾಡಿದರೆ ಜೀವನ ಪೂರ್ತಿ ದೇವಿ ನಮ್ಮ ಕೈ ಬಿಡುವುದಿಲ್ಲ.
ಲೋಕೇಶ್ ಭಕ್ತ ಹೊಟ್ಟೇಗೌಡನದೊಡ್ಡಿ
ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರೆ ಮನಸಿಗೆ ಒಂದು ರೀತಿಯ ಖುಷಿ ಸಿಗುತ್ತದೆ. ಅದೇ ರೀತಿ ಜಿನ್ನಾಗರದಮ್ಮ ದೊಡ್ಡಮ್ಮ ದೇವಿ ದೇಗುಲಕ್ಕೆ ಬಂದರೆ ಸಂತೋಷವಾಗುತ್ತದೆ.
ಲಿಂಗರಾಜು ಭಕ್ತ ಹೊಟ್ಟೇಗೌಡನದೊಡ್ಡಿ.