ಮದ್ದೂರು ನಗರದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಎಂ.ಸಿ.ಬಸವರಾಜು ಮಾನನಾಡಿದರು. ಸಿ.ಶಿವಲಿಂಗಯ್ಯ, ಡಿ.ದೇವರಾಜ್, ಬಿ.ಸ್ವಾಮಿ, ಡಿ.ಸಿ.ಮಹೇಂದ್ರ, ಶಿವರಾಜು ಮರಳಿಗ, ಕೆ.ಟಿ.ಶಿವಕುಮಾರ್, ವಿಜೇಂದ್ರಕುಮಾರ್ ಇದ್ದರು. 
ಮಂಡ್ಯ

ಮೈದಾನ ಅಪವಿತ್ರವಾಗಿಲ್ಲ, ಅವರ ಮನಸ್ಸು ಅಪವಿತ್ರವಾಗಿದೆ

ಮದ್ದೂರು:

ಉತ್ತರಾಖಂಡದ ಹಲ್ದ್ವಾರದಲ್ಲಿರುವ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಂದ ಮೈದಾನ ಅಪವಿತ್ರವಾಗಿದೆ ಎಂದು ಗಂಜಲ ನೀರು ಹಾಕಿ ಸ್ವಚ್ಛ ಮಾಡಿ, ಹೋಮ ಮಾಡಿದ ಮನುವಾದಿಗಳ ನಡವಳಿಕೆ ಖಂಡನೀಯ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಎಂ.ಸಿ.ಬಸವರಾಜು ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪರಿಷತ್ತಿನ ಸಭೆಯಲ್ಲಿ ಅವರು ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಪ್ರಭಾವಿ ಹಿರಿಯ ನಾಯಕರು, ಇಂತಹ ನಾಯಕನಿಗೆ ಸಾರ್ವಜನಿಕವಾಗಿ ಸಂವಿಧಾನ ವಿರೋಧಿ, ಅಸ್ಪಶ್ಯತೆ ಆಚರಿಸುವ ಮೂಲಕ ಅಪಮಾನ ಮಾಡಿರುವುದು ವೈದಿಕ ಶಾಯಿಗಳ ನೀಚ ನಡವಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಅನಿಷ್ಠ ಆಚರಣೆಗಳು, ನಡವಳಿಕೆಗಳು ಇರುವ ಕಾರಣದಿಂದಲೇ ಅನೇಕ ಜನರು ಸನಾತನ ಧರ್ಮವನ್ನು ವಿರೋಧಿಸುತ್ತಿರುವುದು. ನಾಯಿಯನ್ನು ನಾರಾಯಣ ಎನ್ನುವ, ಕೋತಿಯನ್ನು ಆಂಜನೇಯ ಎನ್ನುವ, ನರಿ ಅದೃಷ್ಟದ ಸಂಕೇತ ಎನ್ನುವ, ಗೋವನ್ನು ತಾಯಿ ಎನ್ನುವ ಜನರು ಮನುಷ್ಯನನ್ನು ಮನುಷ್ಯರಂತೆ ಕಾಣದೆ ಅಪಮಾನಿಸುವ ಇವರ ಕೊಳಕು ಮನಸ್ಥಿತಿ ಅದೆಷ್ಟು ಕೊಳಕು. ಅಪವಿತ್ರ ಆಗಿರೋದು ರಾಮ್‌ಲೀಲಾ ಮೈದಾನವಲ್ಲ. ನಿಮ್ಮ ಮನಸ್ಸು ಎಂದು ಹೇಳಬೇಕಾಗಿದೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಮಾತನಾಡಿ, ದಲಿತ ನಾಯಕನೊಬ್ಬನ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದ, ಹೇಸಿಗೆ ಮನಸ್ಥಿತಿಯುಳ್ಳ ಜನರು ಈ ರೀತಿ ಅಪಮಾನಿಸಿರುವುದು ಖಂಡನೀಯ. ಈ ಕೃತ್ಯ ಎಸಗಿದವರ ವಿರುದ್ಧ ಸರ್ಕಾರ ಜಾತಿ ನಿಂದನೆ ದೂರು ದಾಖಲಿಸಿಕೊಂಡು, ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ, ಉಪಾಧ್ಯಕ್ಷ ಡಿ.ದೇವರಾಜ್ ಕೊಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಡಿ.ಸಿ.ಮಹೇಂದ್ರ, ಉಪಾಧ್ಯಕ್ಷ ಶಿವರಾಜು ಮರಳಿಗ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್ ಮುಖಂಡ ವಿಜೇಂದ್ರಕುಮಾರ್ ಇದ್ದರು.