ಪಾಂಡವಪುರ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಭಾಗವಹಿಸಿರುವ ಮಕ್ಕಳು, ಸಾರ್ವಜನಿಕರು.
ಪಾಂಡವಪುರ: ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕುರಿ, ಕೋಳಿ ಸೇರಿದಂತೆ ಹಲವು ಬಗೆಯ ತರಕಾರಿ, ಹೂ-ಹಣ್ಣು, ಸೊಪ್ಪು, ಸಿಹಿ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರ ನೇತೃತ್ವದಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹಳ್ಳಿಯ ಸಂತೆಯನ್ನೇ ಮೀರಿಸುವಂತ್ತಿತ್ತು, ಗ್ರಾಮೀಣ ಸಂತೆಯಲ್ಲಿ ದೊರೆಯುವ ಪ್ರತಿಯೊಂದು ತರಕಾರಿ-ಸೊಪ್ಪು, ಹಣ್ಣು-ಹೂ ಸೇರಿದಂತೆ ವಿಶೇಷವಾಗಿ ಕುರಿ, ಕೋಳಿಯನ್ನು ಸಹ ಮಾರಾಟಕ್ಕೆ ಇಡುವ ಮೂಲಕ ಎಲ್ಲರ ಗಮನ ಸೆಳೆದರು. ಬಿಜಿಎಸ್ ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳು ಸೇರಿದಂತೆ ಪಾಲಕರು, ಸಾರ್ವಜನಿಕರು ಭಾಗವಹಿಸಿ ಮಕ್ಕಳು ಮಾರಾಟಕ್ಕಿಟ್ಟಿದ ತರಕಾರಿ, ಹೂ-ಹಣ್ಣುಗಳನ್ನು ಖರೀದಿಸಿರು.
ಬಳಿಕ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಕೌಶಲ ಅಭಿವೃದ್ಧಿಪಡಿಸುವ ಉದ್ದೇಶದಿಂದ ನಮ್ಮ ಬಿಜಿಎಸ್ ಶಾಲೆಯಲ್ಲಿ ಹಲವು ವರ್ಷಗಳಿಂದ ಮಕ್ಕಳ ಸಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮಕ್ಕಳಿಗೆ ಸಂತೆ, ತರಕಾರಿಗಳು ಎಂದರೇನು? ಅದರ ಬೆಲೆ, ಮೌಲ್ಯಗಳೇನು? ಎನ್ನುವುದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮುಖಂಡರಾದ ಎಚ್.ಎನ್.ಮಂಜುನಾಥ್, ಕಾಂಗ್ರೆಸ್ ಮುಖಂಡ ದೀಪು(ಲೋಹಿತ್), ಮನ್‌ಮುಲ್ ಮಾಜಿ ನಿರ್ದೇಶಕ ಎಲ್.ಸಿ.ಮಂಜುನಾಥ್, ಅಶ್ವತ್ಥ್‌ಕುಮಾರೇಗೌಡ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಬಿ.ಎಸ್.ಜಯರಾಮು, ಮುಖ್ಯಶಿಕ್ಷಕ ರಘು ಸೇರಿದಂತೆ ಹಲವು ಮುಖಂಡರು, ಶಿಕ್ಷಕ ವರ್ಗದವರು ಭಾಗವಹಿಸಿದ್ದರು.