ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ತಹಸೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಶ್ರೀನಿವಾಸ್ ಇದ್ದರು.  
ಮಂಡ್ಯ

ಕ್ಷೇತ್ರ ಅಭಿವೃದ್ಧಿಗೆ ಅಧಿಕಾರಿಗಳ ಸಹಕಾರ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಪಿ.ಎಂ ನರೇಂದ್ರಸ್ವಾಮಿ ಹೇಳಿಕೆ
  • ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಮಳವಳ್ಳಿ: ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಇಲಾಖಾ ವಾರು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಶಾಸಕರಷ್ಟೆ ಅಧಿಕಾರಿಗಳಿಗೂ ಜವಾಬ್ದಾರಿ ಇರಲಿದ್ದು, ಆಡಳಿತ ವರ್ಗ ತಮ್ಮ ಹೊಣೆಗಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಇತ್ತೀಚೆಗೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಿಂದ ಬಹಳಷ್ಟು ದೂರುಗಳು ಕೇಳಿ ಬರುತ್ತಿದೆ. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದಿರುವ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಪಡೆದುಕೊಂಡು ಹೋಗುವಂತೆ ಎಚ್ಚರಿಕೆ ನೀಡಿದರು. ಬದ್ಧ್ದತೆಯಿಂದ ಕೆಲಸ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಅಭಿವದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸುವ ಸಂದರ್ಭದಲ್ಲಿ ಪಟ್ಟಣದಲ್ಲಿ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದು, ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಪುರಸಭೆ ಮುಖ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಸರ್ಕಾರದಿಂದ ಬೇಕಾದ ಅನುದಾನ ಬಿಡುಗಡೆಗೊಳಿಸಿದರೂ ಸಾರ್ವಜನಿಕರಿಗೆ ಮೂಲ ಸೌಲಭ್ಯವನ್ನು ಕಲ್ಪಿಸಿಲ್ಲ, ರಸ್ತೆ ಬದಿಯಲ್ಲಿ ಗಿಡ ಬೆಳೆಸಲು ಮುಂದಾಗಿಲ್ಲ ಎಂದು ಕಿಡಿಕಾರಿದರು.
ಗ್ರಾಮೀಣ ಪ್ರದೇಶದ ಪೆಟ್ಟಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಬಾರ್‌ಗಳಿಂದ ಅಯಾ ವ್ಯಾಪ್ತಿಯ ಗ್ರಾಮಗಳಿಗೆ ಮದ್ಯ ಸರಬರಾಜು ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ದಂಧೆಗೆ ಕಡಿವಾಣ ಹಾಕಲು ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ನೀಡಬೇಕು. ಹೆಚ್ಚುವರಿ ಸಾರಿಗೆ ಬಸ್ ನೀಡುವಂತೆ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯದ ಕೊರತೆಯಾಗದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಸಲಹೆ ನೀಡಿದರು.
ಕಂದಾಯ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ಗ್ರಾಮ ಲೆಕ್ಕಿಗರು ಸಾರ್ವಜನಿಕರ ಸಂಪರ್ಕಕ್ಕೆ ಸಿಗುವಂತೆ ಹಳ್ಳಿಗಳಲ್ಲಿಯೇ ಕಚೇರಿ ತೆರೆಯಬೇಕು. ಉಪ ತಹಸೀಲ್ದಾರ್ ಅವರು ವಿಎ ಮತ್ತು ಆರ್‌ಐಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವ ಬಗ್ಗೆ ಮಾಹಿತಿ ಕಲೆಹಾಕಬೇಕು. ತಹಸೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಹಕ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ಖಡಕ್ ಸೂಚನೆ ನೀಡಿದರು.
ಪರೀಕ್ಷೆಗಳು ಬರುತ್ತಿರುವುದರಿಂದ ವಿದ್ಯಾರ್ಥಿನಿಲಯದಲ್ಲಿ ಊಟ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ನಿಲಯದ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯದ ಬಗ್ಗೆ ಗಮನಹರಿಸಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಿದ್ಯಾರ್ಥಿಗಳ ನಿಲಯ, ಕಾರ್ಯನಿರ್ವಹಿಸುವ ಸಿಬ್ಬಂದಿ, ಮಕ್ಕಳ ಸಂಖ್ಯೆ, ಸೌಲಭ್ಯದ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕೆಂದರು.
ಕಾಡು ಪ್ರಾಣಿಗಳಿಂದ ನಷ್ಟಕೊಳಗಾದ ರೈತರಿಗೆ ಶೀಘ್ರದಲ್ಲಿಯೇ ಪರಿಹಾರ ನೀಡಬೇಕು. ತುಂಡು ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ತೊಂದರೆ ನೀಡಬಾರದು. ಚಿರತೆ ಹಾಗೂ ಆನೆಗಳ ದಾಳಿಗಳನ್ನು ನಿಯಂತ್ರಿಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಂಡು ಪೂರಕ ಮಾಹಿತಿಯನ್ನು ನನಗೆ ನೀಡಬೇಕೆಂದು ಸೂಚನೆ ನೀಡಿದರು.
ಸರ್ಕಾರ ಹಾಗೂ ಜನರ ಸೇತುವೆಯಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದರ ಜತೆಗೆ ಸರ್ಕಾರದ ಅನುದಾನವನ್ನು ಸಮರ್ಪಕ ಬಳಕೆಗೆ ಸಹಕಾರ ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಎಸ್.ವಿ ಲೊಕೇಶ್, ತಾ ಪಂ ಇಒ ಶ್ರೀನಿವಾಸ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.