ಪಾಂಡವಪುರ ಪಟ್ಟಣದ ಹೇಮಾವತಿ ಬಡಾವಣೆ ಸಮೀಪ ನಿರ್ಮಿಸಲಾದ ಕಾಂಪೌಂಡ್ ಅನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಬಸವರಾಜು, ಶ್ರೀನಿವಾಸಾಚಾರ್, ಭಾಸ್ಕರಾಚಾರ್, ಬೆಟ್ಟಾಚಾರ್, ಆನಂದಚಾರ್, ಸಂಪತ್ ಚಾರ್ ಇತರರಿದ್ದರು.
- ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ
ಪಾಂಡವಪುರ: ಸಣ್ಣ ಮತ್ತು ಗುಡಿ ಕೈಗಾರಿಕೆಗಳು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದು, ಇದರಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ವಿಶ್ವಕರ್ಮ ಸಮುದಾಯ ಭವನಕ್ಕೆ ಪಟ್ಟಣದ ಹೇಮಾವತಿ ಬಡಾವಣೆ ಬಳಿ ನಿರ್ಮಿಸಲಾಗಿರುವ ಕಾಂಪೌಂಡ್ ಅನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಐಟಿ-ಬಿಟಿ ಕ್ಷೇತ್ರದಿಂದ ದೇಶದ ಆರ್ಥಿಕತೆಗೆ ಶೇ.15ರಷ್ಟು ಮಾತ್ರ ಕೊಡುಗೆ ಇದೆ. ಆದರೆ, ಸಣ್ಣ ಕೈಗಾರಿಕೆಗಳು ಶೇ.65ರಷ್ಟು ಕೊಡುಗೆ ನೀಡುತ್ತಿವೆ. ಹೀಗಾಗಿ ಪ್ರತಿಯೊಬ್ಬರು ಸಣ್ಣ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಉದ್ಯೋಗ ಸಮಸ್ಯೆ ಇದ್ದು, ಉದ್ಯೋಗ ಸೃಷ್ಟಿಗೆ ಎಲ್ಲರೂ ಮುಂದಾಗಬೇಕು, ವಿಶ್ವಕರ್ಮ ಸಮುದಾಯವದರು ಸಮುದಾಯ ಭವನ ನಿರ್ಮಿಸುವ ಬದಲು ವಿಶ್ವಕರ್ಮ ಸಮುದಾಯದ ವೃತ್ತಿಗೆ ಪೂರಕವಾದ ಉದ್ಯೋಗ ಸೃಷ್ಟಿಸಿಕೊಳ್ಳಲು ಯುವಕರಿಗೆ ತರಬೇತಿ ನೀಡಬೇಕು. ಆ ಮೂಲಕ ಉದೋಗ್ಯ ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಬೇಕು. ವಿಶ್ವಕರ್ಮ ಸಮುದಾಯದ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಡುವುದಾಗಿ ಇದೇ ವೇಳೆ ಭರವಸೆ ನೀಡಿದರು.
ಸಮುದಾಯದ ಅಧ್ಯಕ್ಷ ಮಂಡಿಬೆಟ್ಟಹಳ್ಳಿ ಬಸವರಾಜು ಮಾತನಾಡಿ, ಸಮುದಾಯದ ಹಿರಿಯರ ಸಹಕಾರದಿಂದ ಟ್ರಸ್ಟ್‌ಗೆ ನಿವೇಶನ ಪಡೆಯಲಾಗಿದೆ. ವಿಶ್ವಕರ್ಮ ಸಮುದಾಯದ ನಿಮ್ಮ ಬೆಂಬಲಕ್ಕೆ ನಿಂತಿದೆ. ಶಾಸಕರು ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಭವನ ನಿರ್ಮಾಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎನ್.ಬಸವರಾಜು, ಕಾರ್ಯದರ್ಶಿ ಶ್ರೀನಿವಾಸಾಚಾರ್, ಖಜಾಂಚಿ ಭಾಸ್ಕರಾಚಾರ್, ಸಮುದಾಯದ ಮುಖಂಡರಾದ ಬೆಟ್ಟಾಚಾರ್, ಆನಂದಚಾರ್, ಸಂಪತ್ ಚಾರ್, ಕೃಷ್ಣಾಚಾರ್, ರಾಜು, ಯೋಗರಾಜ್,ಡಿ.ಎ.ನಾಗರಾಜು, ಚಂದ್ರಶೇಖರ್, ಮಂಜಾಚಾರ್, ಮೋಹನ್ ಚಾರ್, ಶಿವು,ರಾಜು, ಸೀನಾಚಾರ್ ಇತರರು ಇದ್ದರು.