ನಾಗಮಂಗಲ ತಾಲೂಕಿನ ಕೋಟೆಬೆಟ್ಟದ ಶ್ರೀ ಕೋಟೆವೆಂಕರಮಣಸ್ವಾಮಿ ರಥೋತ್ಸವ ಭಾನುವಾರ ನಡೆಯಿತು. 
ಮಂಡ್ಯ

ಜೃಂಭಣೆಯ ಕೋಟೆವೆಂಕಟರಮಣಸ್ವಾಮಿ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಕಂಬದ ನರಸಿಂಹಸ್ವಾಮಿ
  • ಕೋಟೆ ವೆಂಕಟರಮಣಸ್ವಾಮಿ ದೇವರು
  • ರಡು ಬೆಟ್ಟಗಳ ಮಧ್ಯದಲ್ಲಿರುವ ಆವರಣ
ನಾಗಮಂಗಲ: ತಾಲೂಕಿನ ಕೋಟೆಬೆಟ್ಟದ ಶ್ರೀ ಕೋಟೆವೆಂಕಟರಮಣಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಕಂಬದ ನರಸಿಂಹಸ್ವಾಮಿ ಮತ್ತು ಕೋಟೆ ವೆಂಕಟರಮಣಸ್ವಾಮಿ ದೇವರುಗಳ ಎರಡು ಬೆಟ್ಟಗಳ ಮಧ್ಯದಲ್ಲಿರುವ ಆವರಣದಲ್ಲಿ ರಥೋತ್ಸವದ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು. ರಥೋತ್ಸವದ ನಿಮಿತ್ತ ಬೆಟ್ಟದ ಮೇಲಿರುವ ದೇವಾಲಯದಲ್ಲಿ 7 ದಿನಗಳಿಂದ ಧಾರ್ಮಿಕ ಕೈಂಕರ್ಯ ನಡೆಯಿತು. ಶನಿವಾರ ರಾತ್ರಿ ಹೋಮ-ಹವನಾದಿಗಳೊಂದಿಗೆ ಕಲ್ಯಾಣೋತ್ಸವ ನಡೆಯಿತು. ರಾಜ್ಯದ ನಾನಾ ಭಾಗಗಳಿಂದ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ಒಕ್ಕಲು ಭಕ್ತರು ಆಗಮಿಸಿದ್ದರು.
ರಾಜ್ಯ ಸರ್ಕಾರದ ಪರವಾಗಿ ಮುಜರಾಯಿ ಇಲಾಖೆಯ ಅಧಿಕಾರ ವರ್ಗ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥ ಸಂಚಾರಕ್ಕೆ ಚಾಲನೆ ನೀಡಿತು. ಪಟ್ಟಣದ ವಿಪ್ರ ಸಮಾಜದ ವೇಧ-ಘೋಷಗಳೊಂದಿಗೆ ಗೋವಿಂದ, ಗೋವಿಂದ ಎಂಬ ನಾಮಸ್ಮರಣೆ ಮುಗಿಲು ಮುಟ್ಟಿತು. ರಥದ ಪೀಠದಲ್ಲಿ ಕೋಟೆವೆಂಕಟರಮಣಸ್ವಾಮಿಯ ಉತ್ಸವಮೂರ್ತಿಯನ್ನು ಕೂರಿಸುತ್ತಿದ್ದಂತೆ ಗರುಡನೆಂದೇ ಕರೆಯಲ್ಪಡುವ ಹದ್ದು ಬೆಟ್ಟ ಸೇರಿದಂತೆ ರಥದ ಸುತ್ತ ಪ್ರದಕ್ಷಿಣೆ ಹಾಕಿತು. ಈ ವೇಳೆ ಭಕಕ್ತರು ಹಣ್ಣು ಜವನ ಎಸೆದರು.
ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರಧಾನ ಅರ್ಚಕರಾದ ವಾಸುದೇವಮೂರ್ತಿ, ಪ್ರಕಾಶ್ ಸೇರಿದಂತೆ ಗ್ರಾಮದ ವೈಷ್ಣವ ಪರಂಪರೆಯ ಅರ್ಚಕರು ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ನೇತೃತ್ವದಲ್ಲಿ ಬ್ರಹ್ಮರಥೋತ್ಸವ ತೆರೆಕಂಡಿತು.
ಮತ್ತೆರಡು ರಥೋತ್ಸವ: ತಾಲೂಕಿನ ಹೋಬಳಿ ಕೇಂದ್ರವಾದ ಬಿಂಡಿಗನವಿಲೆಯ ಶ್ರೀ ಚನ್ನಕೇಶವಸ್ವಾಮಿ ಹಾಗೂ ಬೆಳ್ಳೂರಿನ ಶ್ರೀ ಆದಿಮಾದವರಾಯಸ್ವಾಮಿ ರಥೋತ್ಸವ ಪ್ರತೀತಿಯಂತೆ ಭಾನುವಾರ ನಡೆಯಿತು.