ಕೆ.ಶೆಟ್ಟಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಗ್ರಾಮ ಪರಿಮಿತಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿಪೂಜೆ ನೆರವೇರಿಸಿದರು. ಬಿ.ಬಸವರಾಜು, ಎ.ಎಸ್.ರಾಜೀವ್, ಹರೀಶ್ ಬಾಬು, ಪ್ರಜಾಪ್ರಿಯ ವೆಂಕಟೇಶ್ ಇದ್ದರು.
ಕೆ.ಎಂ.ದೊಡ್ಡಿ: ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟದ್ದು. ಹೈಕಮಾಂಡ್ ಬಲಿಷ್ಠವಾಗಿದ್ದು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಗೊಳ್ಳುತ್ತದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಕರಡಕೆರೆ, ಅರೆಚಾಕನಹಳ್ಳಿ ಹಾಗೂ ಕೆ.ಶೆಟ್ಟಹಳ್ಳಿಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 60 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಅಭಿವೃದ್ಧಿಗೆ ಜೋಡೆತ್ತುಗಳಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವರು ಬಾಯಿ ಚಪಲಕ್ಕೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದರು.
ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳು, ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿ ಮಾಡುತ್ತಿದೆ. ಮೂರು ವರ್ಷಗಳ ಅವಧಿಯಲ್ಲಿ ಪಕ್ಷ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡಲು ಸಾಧನಾ ಸಮಾವೇಶ ಆಯೋಜಿಸಿದ್ದು ಸಾಧನ ಸಮಾವೇಶವನ್ನು ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ. ಆ ಪಕ್ಷ ಒಬ್ಬರು ಪೋಕ್ಸೋ ಕೇಸು ಹೊತ್ತಿರುವ ಆರ್‌ಟಿಜಿಎಸ್ ಹಾಗೂ ಚೆಕ್ ಮೂಲಕ ಲಂಚ ಪಡೆದ ಆರೋಪವಿರುವರಿಗೆ ಅಭಿಮಾನೋತ್ಸವ ಮಾಡಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಗರು ಅನ್ಯ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಅನುಸರಿಸಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಆಧಿಕಾರಕ್ಕೇರುತ್ತಿದ್ದಾರೆ. ತುಮಕೂರು ಭಾಗದಲ್ಲಿ ಸಾವಿರಾರು ಕೋಟಿ ರೂ.ಅನುದಾನ ನೀಡಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಹೇಮಾವತಿ ನದಿ ನೀರನ್ನು ತುಮಕೂರು ಭಾಗದಿಂದ ಮಾಗಡಿ ತಾಲೂಕಿನವರೆಗೂ ವಿಸ್ತರಿಸಿ ರೈತರಿಗೆ ಅನುಕೂಲ ಮಾಡಿದ್ದಾರೆ ಎಂದು ಹೇಳಿದರು.
ಗೆಜ್ಜಲಗೆರೆ ಗ್ರಾಮ ಈಗಾಗಲೇ ನಗರಸಭೆಗೆ ಸೇರ್ಪಡೆಗೊಂಡು ಸರ್ಕಾರ ಮಟ್ಟದಲ್ಲಿ ಅನುಮೋದನೆ ಸಿಕ್ಕಿದೆ. ಈ ಸಂಬಂಧ ಗ್ರಾಮಸ್ಥರು ನ್ಯಾಯಾಲಯ ದಾವೆ ಹೂಡಿದ್ದಾರೆ. ನ್ಯಾಯಾಲಯದಿಂದ ತೀರ್ಪು ಬರುವವರೆಗೂ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳು, ಕಾನೂನು ಸಲಹೆಗಾರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಎಸ್ಸಿ ವಿಭಾಗದ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಮುಖಂಡರಾದ ಕೆ.ಶೆಟ್ಟಹಳ್ಳಿ ರಘು, ಎಸ್.ಸಿದ್ದೇಗೌಡ, ಕರಡಕೆರೆ ಮನು, ಹನುಮಂತೇಗೌಡ, ಸುನಿಲ್, ಗಿರೀಶ್ ಉಪಸ್ಥಿತರಿದ್ದರು.