ಮದ್ದೂರು ನಗರದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಚೇರಿಯಲ್ಲಿ ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯ ನಟ ಉಮೇಶ್‌ರವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೋರಪ್ಪ, ಎಂ.ಸಿ.ಲಿಂಗರಾಜು, ಉಮೇಶ್, ವಿ.ಡಿ.ಶ್ರೀನಿವಾಸ, ಆಲೂರು ಚೆನ್ನಪ್ಪ ಇದ್ದರು.
ಮದ್ದೂರು: ಕಲಾವಿದ ಭೌತಿಕವಾಗಿ ದೂರವಾಗಬಹುದು. ಆದರೆ ರಂಗಭೂಮಿಗೆ ನೀಡಿದ ಕೊಡುಗೆ ಜೀವಂತವಾಗಿರುತ್ತದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಬಣ್ಣಿಸಿದರು.
ನಗರ ಕಚೇರಿಯಲ್ಲಿ ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯ ನಟ ಉಮೇಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐದು ದಶಕಗಳ ಕಾಲ ನಿರಂತರವಾಗಿ ರಂಗಭೂಮಿ ಚಲನಚಿತ್ರ ನಟರಾಗಿ ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮ ಹಾಸ್ಯವನ್ನು ಪ್ರದರ್ಶನ ಮಾಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಅಪರೂಪದ ನಟ ಹಾಗೂ ಅನೇಕ ದಿಗ್ಗಜ ಹಿರಿಯ ನಟರೊಂದಿಗೆ ನಟಿಸಿದ ಕೀರ್ತಿವಂತರು ಎಂದರು.
ಮಕ್ಕಳ ರಾಜ್ಯ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಉಮೇಶ್, ಗುರು ಶಿಷ್ಯರು, ನಾಗರಹೊಳೆ, ಶ್ರುತಿ ಸೇರಿದಾಗ, ಕಾಮನಬಿಲ್ಲು ಸೇರಿದಂತೆ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಕನ್ನಡ ಚಿತ್ರರಂಗವನ್ನು ಜೀವಂತವಾಗಿಡುವ ಇವರ ಪರಿಶ್ರಮ ಸಾರ್ಥಕ ಎಂದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪೌರಾಣಿಕ ನಾಟಕ ನಿರ್ದೇಶಕ ಬೋರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಸೊಂಪುರ ಉಮೇಶ್, ಮಾಜಿ ಯೋಧ ವಿ.ಡಿ.ಶ್ರೀನಿವಾಸ, ನಿವೃತ್ತ ಶಿಕ್ಷಕ ಆಲೂರು ಚೆನ್ನಪ್ಪ, ಮುಖಂಡರಾದ ಅರಳಾಪುರ ಚೇತನ, ವಿ.ಎಚ್.ಶಿವಲಿಂಗಯ್ಯ, ವಿ.ಆರ್.ಸತೀಶ್, ವಿ.ಟಿ.ಕೆಂಚಪ್ಪ, ಅಜ್ಜಹಳ್ಳಿ ಕರಿಗೌಡ, ಸೋಂಪುರ ಕುಮಾರ್, ಗೂಳೇಶ, ರಾಮಣ್ಣ ಇದ್ದರು.