ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದ ಜಾಗದ ವಿಚಾರವಾಗಿ ಕೆ.ಶೆಟ್ಟಹಳ್ಳಿ ಗ್ರಾಮದ ದಲಿತರು ಹಾಗೂ ಸರ್ವಣೇಯರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತವಾರಣ ನಿರ್ಮಾಣವಾಯಿತು.
ಕೆ.ಎಂ.ದೊಡ್ಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಜಾಗದ ವಿಚಾರವಾಗಿ ಇತ್ತೀಚೆಗೆ ಕೆ.ಶೆಟ್ಟಹಳ್ಳಿ ಗ್ರಾಮದ ದಲಿತರು ಹಾಗೂ ಸವರ್ಣೀಯರ ನಡುವೇ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ತಳ್ಳಾಟ ನೂಕಾಟದಲ್ಲಿ ಅಂಬೇಡ್ಕರ್ ಫ್ಲೆಕ್ಸ್‌ಗೆ ಹಾನಿಯಾಗಿದ್ದು ಕೂಡಲೇ ಎಚ್ಚೆತ್ತ ತಾಲೂಕು ಆಡಳಿತ ತಹಶೀಲ್ದಾರ್ ಪರಶುರಾಮ್ ಸತ್ತಿಗೆರೆ ನೇತೃತ್ವದಲ್ಲಿ ಸಭೆ ನಡೆಸಿ, ಬಿಗುವಿನ ವಾತಾವರಣವನ್ನು ತಿಳಿಗೊಳಿಸಲಾಯಿತು.
ಘಟನೆಯ ವಿವರ: ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಬೊಮ್ಮಲಿಂಗೇಶ್ವರ ದೇವಾಲಯದ ಟ್ರಸ್ಟ್ ಹೆಸರಿನಲ್ಲಿರುವ ಜಾಗದಲ್ಲಿ ಸಸಿ ನೆಡುವ ಸಂದರ್ಭದಲ್ಲಿ ದಲಿತರು ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು ಜಾಗ ನೀಡುವಂತೆ ಸಸಿ ನೆಡುವ ಕಾರ್ಯವನ್ನು ತಡೆದು, ಪ್ರತಿಭಟನೆ ನಡೆಸಿದರು. ಈ ವೇಳೆ ಸವರ್ಣೀಯರು ಹಾಗೂ ದಲಿತರ ನಡುವೆ ವಾಗ್ವಾದ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್‌ಸ್ಪೆೆಕ್ಟರ್ ಅನಿಲ್ ಕುಮಾರ್ ಗುಂಪನ್ನು ಚದುರಿಸಿ, ಪೊಲೀಸ್ ತುಕಡಿಗಳನ್ನು ಗ್ರಾಮಕ್ಕೆ ಕರೆಯಿಸಿ, ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದರು.
ತಹಸೀಲ್ದಾರ್ ಪರಶುರಾಮ ಸತ್ತಿಗೆರೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಾಗರಾಜು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮದ ಎರಡೂ ಸಮುದಾಯಗಳ ಹಾಗೂ ಸಂಘಟನೆಗಳ ಮುಖಂಡರ ಸಭೆ ನಡೆಸಲಾಯಿತು.
ಸಭೆಯಲ್ಲಿ ಗುಂಡು ಕಟ್ಟೆ ಜಾಗದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು 5 ಗುಂಟೆ ಜಾಗವನ್ನು ನೀಡಬೇಕೆಂದು ದಲಿತ ಕಾಲನಿ ನಿವಾಸಿಗಳು ಮನವಿ ಮಾಡಿದರು. ಅದನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಿರಸ್ಕರಿಸಿ, ಬೊಮ್ಮಲಿಂಗೇಶ್ವರ ಟ್ರಸ್ಟ್ ಹೆಸರಿನಲ್ಲಿ 30 ಗುಂಟೆ ಜಾಗವನ್ನು ಖಾತೆ ಮಾಡಿಕೊಟ್ಟು, ನಮ್ಮ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಅನುಮೋದನೆ ಪಡೆಯದೆ ಅಕ್ರಮವಾಗಿ ಖಾತೆ ಮಾಡಿದ್ದು, ಗುಂಡುಕಟ್ಟೆ ಜಾಗವನ್ನು ಅಕ್ರಮವಾಗಿ ಮಾಡಿಕೊಂಡಿರುವ ಖಾತೆಯನ್ನು ರದ್ದುಪಡಿಸಿ, ಆ ಜಾಗದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುವು ಮಾಡಿ ಕೊಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ದಲಿತರ ದೂರಿನ ಬಗ್ಗೆ ಸವರ್ಣೀಯ ಸಮುದಾಯ ಮುಖಂಡರು ಆಕ್ಷೇಪಣೆಯನ್ನು ವ್ಯಕ್ತಪಡಿಸಿ, ನಾವು ಗ್ರಾಮದಲ್ಲಿ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದೇವೆ. ಬೊಮ್ಮಲಿಂಗೇಶ್ವರ ದೇವಾಲಯವಿದ್ದು ವರ್ಷಕ್ಕೆ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅವರಿಗೆ ಸೂಕ್ತ ಅನುಕೂಲವಾಗುವ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದೇವಸ್ಥಾನದ ಸುತ್ತ ತಂತಿಯನ್ನು ಅಳವಡಿಸಿದ್ದೇವೆ ಎಂದರು.
ಕಾನೂನು ಪ್ರಕಾರವೇ ಖಾತೆ ಮಾಡಲಾಗಿದ್ದು ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸದೆ, ಮತ್ತೊಂದು ಸ್ಥಳವನ್ನು ಕಲ್ಪಸಬೇಕು. ಗ್ರಾಮದಲ್ಲಿ ಸಾಮರಸ್ಯ ಕಾಪಾಡಲು ಅನುವು ಮಾಡಿಕೊಡಬೇಕು ಎಂದು ಅಧಿಕಾರಗಳಲ್ಲಿ ಮನವಿ ಮಾಡಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೆರೆ ಮಾತನಾಡಿ, ಎರಡು ಕೋಮಿನವರು ಗ್ರಾಮದಲ್ಲಿ ಅನ್ಯೋನ್ಯವಾಗಿದ್ದ ರೀತಿ ಮುಂದೆಯೂ ಇರಬೇಕು. ಗ್ರಾಮದಲ್ಲಿ ಶಾಂತಿ ಕಾಪಾಡಬೇಕು ಎಂದರು.
ಡಿ.20 ರಂದು ಮದ್ದೂರಿನ ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮದ ಎರಡು ಸಮುದಾಯದಗಳ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳೋಣ ಎಂದು ಭರವಸೆ ನೀಡಿದರು.
ಪೊಲೀಸ್ ಇನ್‌ಸ್ಪೆೆಕ್ಟರ್ ಅನಿಲ್‌ಕುಮಾರ್ ಮಾತನಾಡಿ, ಎರಡು ಕೋಮಿನವರು ಗ್ರಾಮದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.