ಮೇಲುಕೋಟೆಯಿಂದ ಪಾಂಡವಪುರದವರೆಗಿನ ಬೆಳ್ಳಾಳೆ ಬನಘಟ್ಟ ಹೊಸೂರು ಗ್ರಾಮಗಳ ಹನುಮನ ದೇವಾಲಯಗಳ ಬಳಿ ಮಾಡಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರ.
- ರಸ್ತೆ ಇಕ್ಕೆಲಗಳಲ್ಲಿ ಆಕರ್ಷಕ ದೀಪಾಲಂಕಾರ
ಮೇಲುಕೋಟೆ: ತಾಲೂಕು ಕೇಂದ್ರದಿಂದ ಮೇಲುಕೋಟೆಯವರೆಗಿನ ಹನುಮನ ದೇಗುಲಗಳು ಡಿ.2ರಂದು ನಡೆಯಲಿರುವ ಹನುಮ ಜಯಂತಿಗೆ ಸಜ್ಜುಗೊಂಡಿವೆ.
ಬನಘಟ್ಟ, ಬೆಳ್ಳಾಳೆ ಹೊಸೂರುಗೇಟ್ ಆಂಜನೇಯನ ದೇಗುಲಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ದೇವಾಲಯವಿರುವ ಹೆದ್ದಾರಿಯ ರಸ್ತೆ ಇಕ್ಕೆಲಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿವೆ. ಶ್ರೀರಾಮ, ಆಂಜನೇಯ, ವೆಂಕಟೇಶ್ವರನ ಬೃಹತ್ ವಿದ್ಯುತ್ ದೀಪಗಳ ಕಟೌಟ್‌ಗಳು ನಯನಮನೋಹರವಾಗಿ ಕಂಗೊಳಿಸುತ್ತಿವೆ. ಯವಕರು ಗ್ರಾಮಸ್ಥರೇ ಸೇರಿ ಮಾಡುತ್ತಿರುವ ಹನುಮನ ಹಬ್ಬದಲ್ಲಿ ಭಕ್ತ ಸ್ನೇಹಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಯಾಯ ಗ್ರಾಮದ ಆಂಜನೇಯನಿಗೆ ಅಭಿಷೇಕ ರಾಮತಾರಕ ಹೋಮ ಮತ್ತು ಪ್ರಸಾದ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಗೊಂಡಿದೆ ಮೇಲುಕೋಟೆಯ ಐತಿಹಾಸಿಕ ಪೇಟೆ ಆಂಜನೇಯ ಪಾರ್ವಟೆ ಮಂಟಪದ ಬಳಿಯ ಕಾರ್ಯಸಿದ್ಧಿ ಹನುಮನ ಸನ್ನಿಧಿಯಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನಡೆಯಲಿದ್ದು ಮೇಲುಕೋಟೆ ಸುತ್ತಮುತ್ತಲ ವಿವಿಧ ಹನುಮನ ದೇಗುಲದಲ್ಲಿ ಜಯಂತಿಯನ್ನು ಅದ್ಧೂರಿಯಾಗಿ ನಡೆಸಲು ಇಡೀ ಗ್ರಾಮಗಳೇ ಸಜ್ಜುಗೊಂಡಿದೆ.