ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ಡಿಂಕದಮ್ಮ ದೇವಸ್ಥಾನದ ಮರು ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಚಾಲನೆ ನೀಡಿದರು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಇಂಜಿನಿಯರ್ ಜಯಪ್ರಕಾಶ್, ಪಿಡಿಒ ಸ್ವಾಮೀಗೌಡ, ರೈತಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ನಾಗರಾಜು, ರೂಪಾ ಇತರರು ಇದ್ದರು.  
ಮಂಡ್ಯ

ಡಿಂಕದಮ್ಮ ದೇವಸ್ಥಾನ ಮರು ನಿರ್ಮಾಣಕ್ಕೆ ಚಾಲನೆ

ಎ. ಆರ್. ರಘುರಾಮ
ಪಾಂಡವಪುರ: ತಾಲೂಕಿನ ಪ್ರಸಿದ್ಧ ಡಿಂಕದಮ್ಮ ದೇವಸ್ಥಾನವನ್ನು 6.14 ಕೋಟಿ ರೂ. ವೆಚ್ಚದಲ್ಲಿ
ಮರು ನಿರ್ಮಾಣ ಮಾಡುವ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದಿನೇದಿನೇ ಅಭಿವೃದ್ದಿ ಹೊಂದುತ್ತಿರುವ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಯೂ
ದ್ವಿಗುಣವಾಗಿದೆ. ಅದರಲ್ಲೂ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹಾಗೂ ಅಮಾವಾಸೆ, ಹುಣ್ಣಿಮೆಯ ದಿನದೊಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮರು ನಿರ್ಮಾಣದ
ಸಂಕಲ್ಪವಾಗಿದೆ ಎಂದರು. ಡಿಂಕದಮ್ಮ ದೇವಸ್ಥಾನದ ಸಮಿತಿಯಲ್ಲಿ 3 ಕೋಟಿ ರೂ. ಹಣವಿದ್ದು, ಅದನ್ನೂ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ಭಕ್ತರು ನೀಡುವ ದೇಣಿ ಹಣವನ್ನೂ ಸಂಗ್ರಹ
ಮಾಡಲಾಗುವುದು. ಸರ್ಕಾರದಿಂದಲೂ ಅನುದಾನ ಬಿಡುಗಡೆ ಮಾಡಿಸಿ ಒಟ್ಟು 6 ಹಂತದಲ್ಲಿ ಕಾಮಗಾರಿ ನಡೆಸಲು ಕ್ರಮವಹಿಸಲಾಗಿದೆ ಎಂದರು. ನಿರ್ಮಿತಿ ಕೇಂದ್ರವು ಕಾಮಗಾರಿಯನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಿದೆ. ಸನ್ನಿಧಿಗೆ ಬರುವ ಭಕ್ತರಿಗೆ ಮೂಲಸೌಕರ್ಯ ಒದಗಿಸುವುದು, ಬೈಪಾಸ್ ರಸ್ತೆ ನಿರ್ಮಾಣಕ್ಕೂ ಕ್ರಮವಹಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.
ಸಂಪೂರ್ಣವಾಗಿ ಶಿಥಿಲಗೊಂಡಿತ್ತು:
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿ, ದೇವಸ್ಥಾನವು ಧಾರ್ಮಿಕದತ್ತಿ ಇಲಾಖೆಯ ಎ ಪ್ರವರ್ಗಕ್ಕೆ ಸೇರಿದೆ. ಸಂಪೂರ್ಣವಾಗಿ ಶಿಥಿಲಗೊಂಡಿದ್ದರಿಂದ ಮರು ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದರು. ದೇವಸ್ಥಾನದ ರಕ್ಷಣೆಗೆ ಬೇಕಾದ ಪೊಲೀಸ್ ವ್ಯವಸ್ಥೆ, ಮೂಲಸೌಕರ್ಯಗಳನ್ನು ಕಲ್ಪಿಸಲೂ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ರಕ್ಷಣೆಗೆ ಕ್ರಮ ವಹಿಸಬೇಕು:
ಮುಖಂಡ ಡಿಂಕಾ ಸೋಮಶೇಖರ್ ಮಾತನಾಡಿ, ದೇವಸ್ಥಾನದಲ್ಲಿ ಈವರೆಗೆ ಸುಮಾರು 10 ಬಾರಿ ಕಳ್ಳತನವಾಗಿದೆ. ವಿಶೇಷ ದಿನಗಳಲ್ಲಿ ಭಕ್ತರು ಬಂದಾಗ ಸಾಕಷ್ಟು ಟ್ರಾಫಿಕ್ ಜಾಮ್ ಆಗುತ್ತದೆ. ಹಾಗಾಗಿ ರಕ್ಷಣಾ ಇಲಾಖೆ ಬಂದೋಬಸ್ತ್ ಕಲ್ಪಿಸಬೇಕು. ದೇಣಿಗೆ, ಆದಾಯದ ಬಗ್ಗೆ ಮುಕ್ತವಾಗಿ ಲೆಕ್ಕ ಪತ್ರಗಳ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಇಂಜಿನಿಯರ್ ಜಯಪ್ರಕಾಶ್, ಪಿಡಿಒ ಸ್ವಾಮೀಗೌಡ, ರೈತಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ನಾಗರಾಜು, ರೂಪಾ, ಮುಖಂಡ ಶಂಕರ ನಂಜಪ್ಪ, ಹಾಳೇಗೌಡ, ಮಹದೇವಪ್ಪ, ರಮೇಶ್, ಚಂದ್ರಕಾಂತ್, ವೆಂಕಟೇಶ್, ರಮೇಶ್, ಬಿ.ಜೆ.ಸ್ವಾಮಿ, ದೇವರಾಜು ಹಾಜರಿದ್ದರು.