ಕಿಕ್ಕೇರಿ ಹೋಬಳಿಯ ಗೌಡೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತ್ಯಮ್ಮದೇವಿ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ, ಧನಂಜಯ, ಸ್ವಾಮಿ, ವೆಂಕಟೇಶ್, ಕೃಷ್ಣೇಗೌಡ ಮತ್ತಿತರರು ಇದ್ದರು.  
ಮಂಡ್ಯ

ಕ್ಲೇಶ ಕಳೆಯಲು ಭಗವಂತನ ಆರಾಧನೆ ಮಾಡಿ

ಎ. ಆರ್. ರಘುರಾಮ
ಕಿಕ್ಕೇರಿ : ಕ್ಲೇಶ ಕಳೆಯಲು ಭಗವಂತನ ಆರಾಧನೆ ಮಾಡಬೇಕು ಎಂದು ಸಮಾಜ ಸೇವಕ ಮಲ್ಲಿಕಾರ್ಜುನ ತಿಳಿಸಿದರು. ಹೋಬಳಿಯ ಗೌಡೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಸಂತ್ಯಮ್ಮದೇವಿ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ವೇಗದ ಬದುಕು ನಮ್ಮದಾಗಿದೆ. ಹಾಗಾಗಿ ನೆಮ್ಮದಿ ಹಾಳಾಗುತ್ತಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಕಿಂಚಿತ್ತಾದರೂ ಅಧ್ಯಾತ್ಮ ಜ್ಞಾನ ಪಡೆದು, ದೇವತಾರಾಧನೆಗೆ ಮುಂದಾಗಬೇಕು ಎಂದರು.
ಐಷಾರಾಮಿ ಬದುಕು ಬಯಸಿದ ಕಾರಣ ಸಹಜ ಸುಖ, ಸಂತೋಷಗಳು ದೂರವಾಗಿವೆ.
ಹಾಗಾಗಿ ಶಾಂತಿ ಪಡೆಯಲು ಊರಿಗೊಂದು ದೇಗುಲ, ಧ್ಯಾನ ಕೇಂದ್ರ, ಪೂಜೆ, ಆರಾಧನೆಯ ತಾಣಗಳು ಅವಶ್ಯಕವಿದೆ ಎಂದರು. ಹಿರಿಯರು ಹಾಕಿಕೊಟ್ಟ ಸನಾತನ ಸಂಸ್ಕೃತಿ, ಹಬ್ಬ, ಹರಿದಿನಗಳನ್ನು ಆಚರಣೆ ಮಾಡಲು ನಾವು ಮುಂದಾಗಬೇಕು. ಇದರಿಂದ ದ್ವೇಷಾಸೂಯೆ ದೂರವಾಗುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ. ಇಂತಹ ಸಂಸ್ಕೃತಿ ಮತ್ತು ಸಂಪ್ರದಾಯ ಯುವಜನರಿಗೆ ಪರಿಚಯ ಆಗಬೇಕು ಎಂದು ಹೇಳಿದರು.
ಊರಿಗೊಂದು ದೇಗುಲ ಬೇಕು. ಪುರಾತನ ದೇಗುಲಗಳನ್ನು ಜೀರ್ಣೋದ್ಧಾರ ಮಾಡುವ
ಸೇವಾಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಊರಿನ ಹಿರಿಯರ ಮಾರ್ಗದರ್ಶನ ಪಡೆಯಬೇಕು ಎಂದರು.
ಬ್ರಾಹ್ಮೀ ಮುಹೂರ್ತದಲ್ಲಿ ವೇದಘೋಷ, ಮಂಗಳವಾದ್ಯದೊಂದಿಗೆ ಮಾತೆಯರು ಪವಿತ್ರ ಗಂಗೆಯನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ತಂದರು. ಮೊದಲಿಗೆ ಗಣಪತಿ ಪೂಜೆ, ನಾಂದಿ, ಪಂಚಕಲಶ, ನವಗ್ರಹ ಅಷ್ಟ ದಿಕ್ಪಾಲಕ, ಅಷ್ಟಲಕ್ಷ್ಮೀ ಹೋಮ, ವಿಗ್ರಹ ಪ್ರತಿಷ್ಠಾಪನೆ,ಅಭಿಷೇಕ,
ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.
ನಂತರ ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ ಮಾಡಲಾಯಿತು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ತಾ.ಪಂ ಮಾಜಿ ಉಪಾಧ್ಯಕ್ಷ ರವಿ, ಮಾಜಿ ಸದಸ್ಯ ಧನಂಜಯ, ಸ್ವಾಮಿ, ವೆಂಕಟೇಶ್, ಕೃಷ್ಣೇಗೌಡ, ರಾಜು, ಅಂಚೆಬೀರನಹಳ್ಳಿ, ಬೋಳಮಾರನಹಳ್ಳಿ, ಮಂಡಲೀಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಸದ್ಭಕ್ತರು, ವಿವಿಧ ಪಕ್ಷದ ಜನಪ್ರತಿನಿಧಿಗಳು ಹಾಜರಿದ್ದರು.