ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಎಚ್.ಟಿ. ಮಂಜು, ಕೆ.ಬಿ. ಮಧು, ಕೃಷ್ಣೇಗೌಡ, ಶೇಖರ್, ಮಲ್ಲೇಶ್, ರಮೇಶ್ ಮತ್ತಿತರರಿದ್ದರು.  
ಮಂಡ್ಯ

ಸತ್ಕಾರ್ಯಗಳಿಂದ ನೆಮ್ಮದಿ ಹೆಚ್ಚಾಗುತ್ತದೆ

ಎ. ಆರ್. ರಘುರಾಮ
ಕಿಕ್ಕೇರಿ : ಸತ್ಕಾರ್ಯಗಳಿಂದ ಮನಕ್ಕೆ ನೆಮ್ಮದಿ ಮತ್ತು ಶಾಂತಿ ದೊರಕುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಹೋಬಳಿಯ ತುಳಸಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರಸ್ವಾಮಿ ದೇವಾಲಯವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಪುರಾತನ ಕಾಲದಿಂದಲೂ ದೇಗುಲ ನಿರ್ಮಿಸುವುದು, ಹತ್ತಾರು ಧಾರ್ಮಿಕ ಚಟುವಟಿಕೆ ನಡೆಸುವುದು, ಆ ಮೂಲಕ ನಮ್ಮ ಸಂಸ್ಕೃತಿಯನ್ನು ಪಾಲಿಸುವುದು ನಮ್ಮ ನಾಡಿನ ಸಂಪ್ರದಾಯವಾಗಿದೆ. ಯುವಜನರು ಸನಾತನ ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ದೇವಾಲಯಗಳು ಉತ್ತಮ ವೇದಿಕೆಗಳಾಗಿವೆ ಎಂದರು.
ಲೋಕದ ಒಳಿತಿಗಾಗಿ ಅಧ್ಯಾತ್ಮಿಕ ಚಿಂತನೆ, ಪೂಜಾರಾಧನೆ, ಹೋಮ ಹವನಾದಿಗಳನ್ನು ಮಾಡಬೇಕು. ಸಾತ್ವಿಕ ಶಕ್ತಿ ಹೆಚ್ಚಾಗಬೇಕು ಎಂದರು. ಕೆ.ಆರ್. ಪೇಟೆ ಕ್ಷೇತ್ರದ ಶಾಸಕ ಎಚ್.ಟಿ. ಮಂಜು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರಿಂದ ತಾಲೂಕು ಇನ್ನಷ್ಟು ಅಭಿವೃದ್ಧಿ ಆಗಲಿದೆ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇಂದ್ರಕ್ಕೆ ಕಳಿಸಿಕೊಟ್ಟಿರುವ ಜಿಲ್ಲೆಯ ಜನರ ಋಣ ತೀರಿಸಲು ನಮ್ಮ ಕುಟುಂಬ ಮತ್ತು ಪಕ್ಷ ಶ್ರಮಿಸಲಿವೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಆದರೂ ಕ್ಷೇತ್ರದ ಶಾಸಕರು ಅನುದಾನವನ್ನು ಕಷ್ಟಪಟ್ಟು ತಂದು ಅಭಿವೃದ್ಧಿ ಮಾಡುತ್ತ ಇದ್ದಾರೆ ಎಂದವರು ಶ್ಲಾಘಿಸಿದರು. ಶಾಸಕ ಎಚ್.ಟಿ. ಮಂಜು, ಮುಖಂಡರಾದ ಕೆ.ಬಿ. ಮಧು, ಶೇಖರ್, ಮಲ್ಲೇಶ್, ರಮೇಶ್ ಮತ್ತಿತರರು ಇದ್ದರು.