ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಭುವನ್ ಎಸ್.ಆರ್ ಗೌಡ ಅವರನ್ನು ಶಾಸಕ ಕೆ.ಎಂ.ಉದಯ್ ಅಭಿನಂದಿಸಿದರು. ಕಸ್ತೂರಿ ಅನಂತೇಗೌಡ, ಅನಂತೇಗೌಡ, ಧನಂಜಯ, ಪ್ರೊ.ಬಿ.ಕೃಷ್ಣ, ಸಿಪಾಯಿ ಶ್ರೀನಿವಾಸ್ ಇದ್ದರು. 
ಮಂಡ್ಯ

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ಪಾತ್ರ ಅಪಾರ

ಮದ್ದೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲೂಕು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಶಾಸಕ ಕೆ.ಎಂ.ಉದಯ ತಿಳಿಸಿದರು.
ಎಸ್ಸೆಸ್ಸೆಲ್ಸಿ-2 ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಭುವನ್ ಎಸ್.ಆರ್.ಗೌಡಗೆ ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ಶನಿವಾರ ಅಭಿನಂದಿಸಿ ಮಾತನಾಡಿದರು.
ಪರೀಕ್ಷೆ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದು, ಇದಕ್ಕೆ ಪ್ರತಿಯೊಬ್ಬ ಶಿಕ್ಷಕರ ಪರಿಶ್ರಮವೇ ಕಾರಣ. ಮುಂದಿನ ದಿನಗಳಲ್ಲಿ ತಾಲೂಕು ಪ್ರಥಮ ಸ್ಥಾನಕ್ಕೆ ಬರಲು ಈಗಿನಿಂದಲೇ ಹೆಚ್ಚಿನ ಶ್ರಮ ವಹಿಸುವ ಜತೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು ಎಂದರು.
ಶಿಕ್ಷಕರ ನಿರಂತರ ಶ್ರಮ ಮತ್ತು ವಿದ್ಯಾರ್ಥಿಗಳ ಕಲಿಕೆಯಿಂದಾಗಿ ಪರೀಕ್ಷೆ ಲಿತಾಂಶದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗಿದ್ದು, ಸರ್ಕಾರಿ ಶಾಲಾ ಶಿಕ್ಷಕರು ಹಗಲು ರಾತ್ರಿ ಎನ್ನದೆ ವಿಶೇಷ ತರಗತಿಗಳನ್ನು ನಡೆಸುವ ಜತೆಗೆ ಇಂಗ್ಲಿಷ್, ಸಮಾಜ, ಗಣಿತ ವಿಷಯಗಳ ಬಗ್ಗೆ ನುರಿತ ತಜ್ಞರಿಂದ ಹಲವು ಕಾರ್ಯಾಗಾರ ಆಯೋಜಿಸಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧ ಪಡಿಸಿದ ಪರಿಣಾಮ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಲು ಅನುಕೂಲವಾಯಿತು ಎಂದರು.
ಮುಂದಿನ ದಿನಗಳಲ್ಲಿ ದುರಸ್ತಿಯಲ್ಲಿರುವ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲ ಸೌಕರ್ಯದ ವ್ಯವಸ್ಥೆ, ಆಟದ ಮೈದಾನ ಮತ್ತು ಅಗತ್ಯವಿರುವ ಕಡೆ ಶಿಕ್ಷಕರನ್ನು ನಿಯೋಜಿಸಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳು ಮತ್ತು ನೋಟ್ ಬುಕ್, ಬ್ಯಾಗ್ ವಿತರಿಸಲು ಕ್ರಮ ವಹಿಸಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ನಿಗದಿತ ಸಮಯದಲ್ಲಿ ಶಾಲೆಗೆ ಹಾಜರಾಗಿ ಮಕ್ಕಳ ಭವಿಷ್ಯ ರೂಪಿಸಲು ನಿರಂತರವಾಗಿ ಶ್ರಮಿಸುವಂತೆ ಮುಂದಿನ ದಿನಗಳಲ್ಲಿ ಅಗತ್ಯವಿರುವ ಶಾಲೆಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.
ಬಿಇಒ ಧನಂಜಯ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಅಧ್ಯಕ್ಷೆ ಕಸ್ತೂರಿ, ಮುಖ್ಯ ಶಿಕ್ಷಕ ಎಚ್. ಆರ್.ಆನಂತೇಗೌಡ, ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಬಿ.ಕೃಷ್ಣ, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ಇತರರಿದ್ದರು.