ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕರನ್ನು ಅಭಿನಂದಿಸಲಾಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ತಾಪಂ ಇಒ ವೀಣಾ ಇತರರು ಇದ್ದರು. 
ಮಂಡ್ಯ

ಶಿಕ್ಷಕರೇ ಇಲ್ಲದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಾಧ್ಯವೇ?

ನಾಗೇಶ ಎಸ್
ಪಾಂಡವಪುರ: ಶಿಕ್ಷಣ ಕ್ಷೇತ್ರದಲ್ಲಿರುವ ಪ್ರತಿ ಸಮಸ್ಯೆಗಳನ್ನು ಅರ್ಥೈಸಿಕೊಂಡು ಶಿಕ್ಷಕರು ಭೋದನೆ ಮಾಡಬೇಕು ಎಂದು ಚಿಂತಕ, ಲೇಖಕ ಶ್ರೀಪಾದಭಟ್ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ನೀತಿ, ಮೂಲ ಸೌಕರ್ಯಗಳ, ಬೋಧನ ಕ್ರಮದ ಬಿಕ್ಕಟ್ಟುಗಳಿವೆ. ಶಿಕ್ಷಣ ವ್ಯವಸ್ಥೆಯ ಶಕ್ತಿ, ದೌರ್ಬಲ್ಯಗಳನ್ನು ಅರ್ಥೈಸಿಕೊಂಡು ಪಾಠ ಪ್ರವಚನ ಮಾಡಬೇಕು ಎಂದರು.
ದೇಶದಲ್ಲಿ ಗುಣಮಟ್ಟದ ಶಿಕ್ಷಣ ಯಾವುದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ, ಜತೆಗೆ ಶಿಕ್ಷಣ ಸಾರ್ವತ್ರಿಕರಣಗೊಂಡಿದೆಯೇ? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ. ರಾಜ್ಯದಲ್ಲಿ 45 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಾತಿಯಾಗಬೇಕಿದೆ. ಹೀಗಿರುವಾಗ ಶಿಕ್ಷಕರೇ ಇಲ್ಲದಂತಹ ಶಾಲೆಗಳಲ್ಲಿ ಯಾವ ರೀತಿಯ ಗುಣಮಟ್ಟದ ಶಿಕ್ಷಣ ಗುರುತಿಸಲು ಸಾಧ್ಯವಾಗುತ್ತದೆ. ಅಂಕಿ ಅಂಶದ ಪ್ರಕಾರ 1ನೇ ತರಗತಿಯಿಂದ ಉನ್ನತ್ತ ಶಿಕ್ಷಣದವರೆಗೂ ಪ್ರತಿ ವರ್ಷದ ಶೇ.60ರಷ್ಟು ಮಕ್ಕಳು ಹಲವಾರು ಕಾರಣಗಳಿಂದ ಶಿಕ್ಷಣ ವಂಚಿತರಾಗುತ್ತಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿ ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿವೆ. ಇದಕ್ಕೆ ಸರ್ಕಾರ ಶಾಲೆಗಳ ಅಭಿವೃದ್ಧಿಗೆ ನೀಡುತ್ತಿರುವ ಅನುದಾನ ಕಡಿಮೆಯಾಗಿದೆ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕಾಗಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸಿ ದೇಶದ ಪ್ರಗತಿ ಸಾಧನೆ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಪ್ರಸ್ತುತ ದಿನಗಳಲ್ಲಿ ಎದುರಾಗಿರುವ ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರು ಮಹತ್ತರವಾದ ಹೆಜ್ಜೆ ಇಡಬೇಕು. ನೀವು ಶಿಕ್ಷಣ ಸಚಿವರಾಗಿದ್ದರೆ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ಯಾವ ರೀತಿ ಕ್ರಮ ಕೈಕೊಳ್ಳುತ್ತಿದ್ದೀರಿ ಎನ್ನುವುದನ್ನು ಅರಿತು ಕೆಲಸ ಮಾಡಬೇಕು ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ ಉತ್ತಮ ಶಿಕ್ಷಕರನ್ನು ಅಭಿನಂಧಿಸಲಾಯಿತು. ತಾಪಂ ಇಒ ವೀಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಇಒ ಧರ್ಮಶೆಟ್ಟಿ, ಬಿಆರ್‌ಸಿ ಪ್ರಕಾಶ್, ಶಿಕ್ಷಣ ಪರಿವೀಕ್ಷಕ ಕಡತನಾಳು ಶ್ರೀನಿವಾಸ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ ಇತರರು ಇದ್ದರು.