ನಾಗಮಂಗಲ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. 
ಮಂಡ್ಯ

ಸಂಸ್ಕಾರಯುತ ಶಿಕ್ಷಣದಿಂದ ವ್ಯಕ್ತಿತ್ವ ಪರಿಪೂರ್ಣ

ನಾಗೇಶ ಎಸ್
ನಾಗಮಂಗಲ: ಅಂಕ ಗಳಿಕೆಯ ಜತೆಗೆ ಸಂಸ್ಕಾರ, ಇತಿಹಾಸ ಹಾಗೂ ಸಾಮಾನ್ಯ ಜ್ಞಾನವನ್ನು ಮೈಗೂಡಿಸಿಕೊಂಡವರು ಮಾತ್ರ ಪರಿಪೂರ್ಣ ವ್ಯಕ್ತಿತ್ವವುಳ್ಳವರಾಗಿ ಸಮಾಜಕ್ಕೆ ಉತ್ತಮ ಪ್ರಜೆಯಾರುವುದು ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಹೆಚ್ಚು ಅಂಕ ಗಳಿಸುವ ಜತೆಗೆ ಸಾಮಾನ್ಯ ಜ್ಞಾನ, ಸಂಸ್ಕೃತಿ ಹಾಗೂ ದೇಶದ ಇತಿಹಾಸವನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಪರಿಪೂರ್ಣವಾದ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಪಠ್ಯದ ಜತೆಗೆ ಶಿಕ್ಷಕರು ಸಾಮಾನ್ಯ ಜ್ಞಾನ, ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಬೋಧನೆ ಮಾಡಬೇಕಿದೆ. ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 5ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಈ ಫಲಿತಾಂಶ ತರಲು ಶ್ರಮಿಸಿದ ಅಧಿಕಾರಿ ವರ್ಗ, ಶಿಕ್ಷಕರು ಹಾಗೂ ಪಾಲಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜಿಲ್ಲೆಯ ಶಿಕ್ಷಣ ಮಟ್ಟ ಉನ್ನತ್ತಕ್ಕೇರುತ್ತಿರುವುದು ಸಂತೋಷದ ವಿಷಯವಾಗಿದೆ. ಈ ಹಿಂದೆ ಮಂಗಳೂರು, ಉಡುಪಿ ಜಿಲ್ಲೆಗಳ ಫಲಿತಾಂಶಕ್ಕೂ ನಮ್ಮ ಜಿಲ್ಲೆಯ ಫಲಿತಾಂಶದ ನಡುವಿನ ಅಂತರ 10 ರಿಂದ 16 ಇರುತ್ತಿತ್ತು. ಆದರೆ ಈ ವರ್ಷ ಉಡುಪಿ, ಮಂಗಳೂರು ಜತೆಯಲ್ಲಿ ಅಂದರೆ ಟಾಪ್ ಐದು ಜಿಲ್ಲೆಗಳ ಪಟ್ಟಿಯಲ್ಲಿ ನಾವಿದ್ದೇವೆ. ಈ ಸಾಲಿನಲ್ಲಿ ಪಾಲಕರು, ಶಿಕ್ಷಕಕರು ಚಾಲೇಂಜ್ ಆಗಿ ತೆಗೆದುಕೊಂಡರೆ ಮಂಡ್ಯ ಜಿಲ್ಲೆ ಮೊದಲ ಸ್ಥಾನ ಪಡೆಯಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕಿದೆ. ಅದಕ್ಕೆ ಆಗಬೇಕಾದ ಸಹಕಾರ ನೀಡಲಿದ್ದೇನೆ ಎಂದರು.
ಮಕ್ಕಳ ಈ ಸಾಧನೆಗೆ ತಂದೆ-ತಾಯಿ ಶ್ರಮ ಅಪಾರವಾಗಿದೆ. ಜೀವನದ ಸವಾಲುಗಳ ಬಗ್ಗೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ತಿಳಿಸಬೇಕಿದೆ. ವಿದ್ಯಾರ್ಥಿಗಳಿಗೆ ಸರ್ಕಾರ ಹತ್ತಾರು ಉಪಯೋಗಗಳನ್ನು ಮಾಡುತ್ತಿದ್ದು, ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರು ಕೂಡ ಸರ್ಕಾರ ನಿಮ್ಮಿಂದ ನಿರೀಕ್ಷಿಸುವುದು ನಾಡಿಗೆ ಉತ್ತಮ ಪ್ರಜೆಯಾಗಲಿ ಎಂದಷ್ಟೇ ಆಗಿದೆ ಎಂದು ತಿಳಿಸಿದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರವಾದ ಸರ್ಕಾರ ನಮ್ಮದಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಶಿಕ್ಷಕರ ನೇಮಕಾತಿ ಹಾಗೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಶಿಕ್ಷಣಕ್ಕೆ ಯಾವುದೇ ಅಡಚಣೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಖಾಸಗಿ ಕಂಪನಿಗಳ ಸಿಎಸ್‌ಆರ್ ಫಂಡ್ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ನಿರ್ಧಾರ ಮಾಡಲಾಗಿದೆ. ಖಾಸಗಿ ಕಂಪನಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಿಕ್ಷಣದಲ್ಲಿ ಬದಲಾವಣೆ ತರುತ್ತಿವೆ. ರಾಜ್ಯಕ್ಕೆ ಇಚ್ಚಾಸಕ್ತಿಯ ಸಿಎಂ ಸಿಕ್ಕಿದ್ದಾರೆ. ಎಲ್ಲ್ಲ ಅಭಿವೃದ್ಧಿ ಕಾರ್ಯಗಳ ನಡುವೆ ಗುಣಮಟ್ಟ, ಆರ್ಥಿಕತೆಯಲ್ಲಿಯೂ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ತಾಲೂಕಿನ ವ್ಯಾಪ್ತಿಯ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ ಹಾಗೂ ಪದವಿಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಸುಮಾರು 452 ವಿದ್ಯಾರ್ಥಿಗಳನ್ನು ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಿದರು. ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಜತೆಗೆ ಮೂಲತಃ ನಾಗಮಂಗಲ ತಾಲೂಕಿನವರಾಗಿ ಹೊರ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಜತೆಗೆ ಪ್ರಸಕ್ತ ಸಾಲಿನಲ್ಲಿ ನಿವೃತ್ತರಾದ 45 ಶಿಕ್ಷಕರಿಗೆ ಸನ್ಮಾನ ಹಾಗೂ ಶಿಕ್ಷಕರ ದಿನದ ಅಂಗವಾಗಿ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್, ಡಿಡಿಪಿಐ ಬಸವರಾಜು, ಡಯಟ್ ಪ್ರಾಂಶುಪಾಲ ಯೋಗೇಶ್, ಬಿಇಒ ಲೋಕೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜೆ.ವೈ.ಮಂಜುನಾಥ್ ಇದ್ದರು.