ಕೆ.ಆರ್.ಪೇಟೆ ಕೆಪಿಎಸ್ ಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕೆ.ಆರ್.ಪೇಟೆ: ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆಯ ಶೈಕ್ಷಣಿಕ ಫಲಿತಾಂಶವನ್ನು ಕೆಳಗಿನಿಂದ ನೋಡಬೇಕಾದ ಪರಿಸ್ಥಿತಿ ಇತ್ತು. ಆದರೆ ಸರ್ಕಾರಿ ಶಾಲೆಗಳ ಶಿಕ್ಷಕರ ಪ್ರಾಮಾಣಿಕ ಪರಿಶ್ರಮದಿಂದ ಇಂದು ಫಲಿತಾಂಶದಲ್ಲಿ ಜಿಲ್ಲೆ ಮೇಲ್ಮಟ್ಟಕ್ಕೇರುವಂತಾಗಿದೆ ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರಿಂದಲೇ ಅಖಂಡ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಿದೆ. ಆದ್ದರಿಂದ ಶಿಕ್ಷಕರು ಸದಾ ಜಾಗೃತ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು. ಮೌಲ್ಯಗಳನ್ನು ಉಳಿಸಿಕೊಂಡು ಕಾರ್ಯನಿರ್ವಹಿಸಬೇಕು. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೆ ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಭಾಷಾ ಪ್ರೌಢಿಮೆ ಹೆಚ್ಚಿಸುವ ಕೆಲಸವಾಗಬೇಕು. ಇಂದು 625ಕ್ಕೆ 625 ಅಂಕ ಪಡೆಯುತ್ತಿರುವ ಮಕ್ಕಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೂ ಇದ್ದಾರೆ. ಶಿಕ್ಷಕ ವೃತ್ತಿ ಜಗತ್ತಿನಲ್ಲೇ ಶ್ರೇಷ್ಠವಾದುದು. ಹೀಗಾಗಿ ಸಮಾಜ ಶಿಕ್ಷಕರಿಂದ ಹೆಚ್ಚಿನ ನೈತಿಕತೆಯನ್ನು ನಿರೀಕ್ಷಿಸುತ್ತದೆ. ಎಷ್ಟೇ ಒತ್ತಡವಿದ್ದರೂ ಶಿಕ್ಷಕರು ತಮ್ಮ ಮನಃಸ್ಥಿತಿ ಬದಲಿಸಿಕೊಳ್ಳಬಾರದು. ಚುನಾವಣೆ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಯದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದರು. ಶಾಸಕ ಎಚ್.ಟಿ.ಮಂಜು ಮಾತನಾಡಿ, ಬಾಲ್ಯದಿಂದ ಇಲ್ಲಿಯವರೆಗೆ ಅಕ್ಷರ ಜ್ಞಾನ, ತಿಳಿವಳಿಕೆ ಹಾಗೂ ಮಾನವೀಯತೆ ಕಲಿಸಿದ ಸಮಸ್ತ ಶಿಕ್ಷಕರನ್ನು ಸ್ಮರಿಸುವ ದಿನವೇ ಶಿಕ್ಷಕರ ದಿನಾಚರಣೆ. ತಾಲೂಕಿನ ಶಿಕ್ಷಕರ ಬಗ್ಗೆ ಹೆಮ್ಮೆ ಇದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಕರು ಶ್ರಮಿಸಿದ್ದಾರೆ. ಇದಕ್ಕಾಗಿ ತಾಲೂಕಿನ ಎಲ್ಲ ಶಿಕ್ಷಕರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ 2026-27ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ತಾಪಂ ಇಒ ಕೆ.ಸುಷ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಮಂಜುನಾಥ್, ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಆನಂದ್‌ಕುಮಾರ್, ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ ಇದ್ದರು.