ಪಾಂಡವಪುರದ ಕಸಾಪ ಭವನದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಸುತ್ತೂರು ಶ್ರೀಗಳು ಉದ್ಘಾಟಿಸಿದರು. ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಪುಟ್ಟರಾಜು, ಪ್ರೊ.ಎಂ.ಕೃಷ್ಣೇಗೌಡ, ಪ್ರೊ.ಡಾ.ಬಿ.ಜಯಪ್ರಕಾಶ್ ಗೌಡ, ಮಹದೇವಯ್ಯ, ಮೇನಾಗರ ಪ್ರಕಾಶ್ ಇದ್ದರು. 
ಮಂಡ್ಯ

ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿ

ಪ್ರಮುಖ ಮುಖ್ಯಾಂಶಗಳು

  • ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
  • ಕನ್ನಡ ಸಾಹಿತ್ಯ ಪರಿಷತ್ ಭವನ
ಪಾಂಡವಪುರ: ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಹಂತದಲ್ಲಿಯೇ ಜೀವನದ ನೈತಿಕತೆ, ಮೌಲ್ಯ, ವಿನಯತೆ, ಸಂಸ್ಕಾರ ಕಲಿಸುವ ಕೆಲಸವಾಗಬೇಕಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಅವರ ’ಚಂದ್ರಬಿಂಬ’ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಚಂದ್ರಶೇಖರಯ್ಯ ಅವರು ಶಿಕ್ಷಕ ವೃತ್ತಿಯೊಂದಿಗೆ ಉತ್ತಮ ಕಲಾವಿದ, ಸಾಹಿತ್ಯ, ಆಡಳಿತಗಾರರೂ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಜೀವನ ಎಂದರೆ ಸನ್ಯಾಸತ್ವವನ್ನು ಸ್ವೀಕರಿಸುವುದು ಮಾತ್ರವಲ್ಲ. ಬದಲಾಗಿ ನಮ್ಮೊಳಗಿರುವ ಅಹಂಕಾರವನ್ನು ತ್ಯಜಿಸಿ ನಿರಾಪೇಕ್ಷೆ ವ್ಯಕ್ತಿಗಳಾಗಿ ಬದುಕುವುದೂ ಅಧ್ಯಾತ್ಮವೇ ಎಂದರು.
ಅಭಿನಂದನಾ ಗ್ರಂಥಗಳನ್ನು ಹೆಚ್ಚಾಗಿ ಹೊರತರುವ ಕೆಲಸವಾಗಬೇಕು. ಆದರ್ಶಪ್ರಾಯ ವ್ಯಕ್ತಿಗಳ ಗುಣಗಳನ್ನು ಸಾಹಿತ್ಯ, ಅಕ್ಷರಗಳ ಮೂಲಕ ಪ್ರತಿಬಿಂಬಿಸಿ ದಾಖಲಿಸುವ ಕೆಲಸ ಸಮಾಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಆಗಬೇಕಿದೆ ಎಂದು ಸಲಹೆ ನೀಡಿದರು.
ಪ್ರೊ.ಬಿ.ನಾರಾಯಣಗೌಡ ಮಾತನಾಡಿ, ಜನರಿಗೆ ಅಗತ್ಯ ಇರುವ ಅರಣ್ಯ, ಖನಿಜ, ಜಲಸಂಪತ್ತು, ವ್ಯವಸಾಯಕ್ಕೆ ಯೋಗ್ಯವಾದ ಕೃಷಿ ಭೂಮಿ, ಭೂಸಂಪತ್ತು, ಮಾನವಸಂಪತ್ತು ಎಲ್ಲವೂ ಇದೆ. ಆದರೆ ಪ್ರಾಮಾಣಿಕತೆ, ಸತ್ಯ, ಧರ್ಮ ಇಲ್ಲವಾಗಿದೆ. ಮಕ್ಕಳ ಮನಸ್ಸನ್ನು ತಿದ್ದಿ ಸಮಾಜದ ಸತ್ಪ್ರಜೆಗಳಾಗಿ ಹೊರತರುವ ಕೆಲಸವನ್ನು ಶಿಕ್ಷಕರಾಗಿ ಚಂದ್ರಶೇಖರಯ್ಯ ಅವರು 36 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ ಎಂದು ಬಣ್ಣಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ.ಎಂ.ಕೃಷ್ಣೇಗೌಡ ಅವರು ಚಂದ್ರಶೇಖರಯ್ಯ ಅವರ ಚಂದ್ರಬಿಂಬ ಅಭಿನಂದನಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಡಾ.ಬಿ.ಜಯಪ್ರಕಾಶ್ ಗೌಡ ಅವರು ಅಭಿನಂದನಾ ಭಾಷಣ ಮಾಡಿದರು. ಇದೇ ವೇಳೆ ಚಂದ್ರಶೇಖರಯ್ಯ ಅವರನ್ನು ಅಭಿನಂದಿಸಲಾಯಿತು. ಲಂಡನ್ ಮಹದೇವಯ್ಯ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಇತರರಿದ್ದರು.