ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮದಲ್ಲಿ ರೈತರ ಮನೆ ಬಾಗಿಲಲ್ಲೇ ಭತ್ತ ಖರೀದಿಸುವ ಪ್ರಕ್ರಿಯೆಗೆ ಶನಿವಾರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ ಚಾಲನೆ ನೀಡಿದರು. ಮಹಾದೇವ, ಚಂದಗಾಲು ತಿಮ್ಮೇಗೌಡ, ರಾಮೇಗೌಡ ಇತರರು ಇದ್ದರು.
ಶ್ರೀರಂಗಪಟ್ಟಣ: ಪ್ರಸ್ತುತ ಅಂದಾಜು 500 ಟನ್ ಭತ್ತವನ್ನು ರೈತರಿಂದಲೇ ನೇರವಾಗಿ ಖರೀದಿಸಿ, ನಮ್ಮದೇ ಬ್ರಾೃಂಡ್‌ನಲ್ಲಿ ಮಾರಾಟ ಮಾಡುವ ಉದ್ದೇಶವನ್ನು ಕೃಷಿ ಇಲಾಖೆ ಹೊಂದಿದ್ದು, ಅದರಿಂದ ಬರುವ ಲಾಭವನ್ನು ರೈತರಿಗೆ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್. ಅಶೋಕ ಮಾಹಿತಿ ನೀಡಿದರು.
ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಶನಿವಾರ ರೈತರ ಮನೆ ಬಾಗಿಲಲ್ಲೇ ಕ್ವಿಂಟಾಲ್‌ಗೆ 2,500 ರೂ. ಬೆಂಬಲ ಬೆಲೆ ನೀಡಿ ಭತ್ತ ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಈ ಬಾರಿಯ ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳಿಂದ ರೈತರನ್ನು ರಕ್ಷಣೆ ಮಾಡುವ ಉದ್ದೇಶದಿಂದ ರೈತ ಉತ್ಪಾದಕರ ಕಂಪನಿಗಳ ಮೂಲಕ ಭತ್ತವನ್ನು ಉತ್ತಮ ಬೆಲೆ ನೀಡಿ ನೇರವಾಗಿ ಖರೀದಿಸುವ ವಿಶೇಷ ಕಾರ್ಯಕ್ರಮಕ್ಕೆ ಕೃಷಿ ಇಲಾಖೆ ವತಿಯಿಂದ ಚಾಲನೆ ನೀಡಲಾಗಿದ್ದು, ನಮ್ಮದೇ ಬ್ರಾೃಂಡ್ ಮೂಲಕ ಗ್ರಾಹಕರಿಗೆ ಅಕ್ಕಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಈ ಯೋಜನೆಗೆ ಎಲ್ಲೆಡೆ ಉತ್ತಮ ಸ್ಪಂದನೆ-ಸಹಕಾರ ಸಿಗುವ ಜತೆಗೆ ರೈತರಿಗೆ ಲಾಭ ದೊರೆಯಲಿದೆ ಎಂಬ ಭರವಸೆ ಇದೆ ಎಂದರು.
ಬೆಲ್ಲದ ನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹಾದೇವ, ಹಿರಿಯ ಸಹಕಾರಿ ಚಂದಗಾಲು ತಿಮ್ಮೇಗೌಡ, ಸಹಾಯಕ ಕೃಷಿ ನಿರ್ದೇಶಕ ರಾಮೇಗೌಡ, ಕಾವೇರಿ ಮಾತೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಹನುಮಂತೇಗೌಡ, ಕೃಷಿ ಅಧಿಕಾರಿ ಶಿಲ್ಪಾ, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಕಾವ್ಯಾ, ಪ್ರಗತಿಪರ ರೈತ ನಂಜೇಗೌಡ ಮತ್ತಿತರರು ಇದ್ದರು.