ಕೆ.ಎಂ.ದೊಡ್ಡಿಯ ಚಾಂಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಆರ್. ಮಣಿ ಚಾಲನೆ ನೀಡಿದರು.
- ಚಾಂಶುಗರ್ಸ್ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ಆರ್.ಮಣಿ ಮಾಹಿತಿ
ಕೆ.ಎಂ.ದೊಡ್ಡಿ: ಇಲ್ಲಿನ ಚಾಂಶುಗರ್ಸ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯ ಆರಂಭಿಸಿದ್ದು ಉತ್ತಮ ಮಳೆಯಾದರೆ 7 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆ ಹಿರಿಯ ಉಪಾಧ್ಯಕ್ಷ ಆರ್.ಮಣಿ ತಿಳಿಸಿದರು.
ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ದಿನ 5000 ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮರ್ಥ್ಯವಿದೆ. ಈ ಸಾಲಿನಲ್ಲಿ 7 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆಯುವ ಗುರಿ ಹೊಂದಲಾಗಿದೆ. 2026-27ನೇ ಸಾಲಿಗೆ ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ರೈತರಿಗೆ ಅನುವಾಗುವಂತೆ ಬಳ್ಳಾರಿ, ತಮಿಳುನಾಡು ಮತ್ತು ಮಹಾರಾಷ್ಟ್ರ ಭಾಗಗಳಿಂದ ಆಳುಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಸೂಕ್ತ ದರದಲ್ಲಿ ಕಬ್ಬು ಕಟಾವು ಮಾಡಲಾಗುವುದು. ಅಲ್ಲದೆ ಪ್ರಸ್ತುತ ಸಾಲಿನಲ್ಲಿ ಸರಬರಾಜು ಆಗುವ ಕಬ್ಬಿಗೆ ಸಕಾಲದಲ್ಲಿ ಹಣ ಬಟವಾಡೆ ಮಾಡಲಾಗುತ್ತದೆ. ಕಬ್ಬು ನಾಟಿ ಮಾಡಲು ರೈತರಿಗೆ ಸಹಾಯವಾಗಲೆಂದು ಕಾರ್ಖಾನೆ ವತಿಯಿಂದ ಬಡ್ಡಿ ರಹಿತ ಸಾಲದ ರೂಪದಲ್ಲಿ ಎಕರೆಗೆ 2.5 ಯಿಂದ 3 ಟನ್ ಬಿತ್ತನೆ ಕಬ್ಬಿನ ಬಿತ್ತನೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ವಿಭಾಗ ಮಟ್ಟದಲ್ಲಿ ರೈತರಿಗೆ ಆರೋಗ್ಯವಂತ, ಉತ್ಕೃಷ್ಟ ಗುಣಮಟ್ಟದ ಒಂದು ಕಣ್ಣಿನ ಕಬ್ಬಿನ ಸಸಿಗಳನ್ನೂ ಸಹ ಬಡ್ಡಿರಹಿತ ಸಾಲದ ರೂಪದಲ್ಲಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರೈತರಿಗೆ ನೀಡಬೇಕಾಗಿರುವ 50 ರೂ. ಪ್ರೋತ್ಸಾಹ ಧನ ವಿಚಾರ ನ್ಯಾಯಲಯದಲ್ಲಿದ್ದು, ಪ್ರಕರಣ ಇತ್ಯರ್ಥವಾದ ನಂತರ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಕಾರ್ಖಾನೆ ಆಡಳಿತ ಮಂಡಳಿ ಭರವಸೆ ನೀಡಿದೆ ಎಂದರು.
ಇದಕ್ಕೂ ಮುನ್ನ ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ ನೆರವೇರಿತು. ಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಕಾರ್ಖಾನೆಗೆ ಮೊದಲು ಕಬ್ಬು ತುಂಬಿಕೊಂಡು ಬಂದ ಎತ್ತಿನಗಾಡಿ, ಟ್ಯಾಕ್ಟರ್, ಲಾರಿಗೆ ಬಹುಮಾನ ವಿತರಿಸಲಾಯಿತು. ಕಾರ್ಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಸೆಂಥಿಲ್, ಪ್ರಧಾನ ವ್ಯಸ್ಥಾಪಕ ಎಂ.ರವಿ, ಕಬ್ಬು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹದೇವ ಪ್ರಭು, ಸಹಾಯಕ ಪ್ರಧಾನ ವ್ಯವಸ್ಥಪಕ ಮಣಿಮಾರನ್, ಆಡಳಿತ ವಿಭಾಗದ ಅಧಿಕಾರಿಗಳಾದ ನಿತೇಶ್, ನಿಂಗಯ್ಯ ಇತರರಿದ್ದರು.