ಮದ್ದೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮೂರು ಪಕ್ಷದ ಕಾರ್ಯಕರ್ತರು ಮುಖಂಡರು ಜಮಾವಣೆಗೊಂಡಿರುವುದು. ಮದ್ದೂರು
ಮಂಡ್ಯ

ಟಿಎಪಿಸಿಎಂಎಸ್ ಮತದಾನ ಚುರುಕು

ಬೆಳಗ್ಗೆಯಿಂದಲೇ ಉತ್ಸಾಹದಿಂದ ಹಕ್ಕುಚಲಾಯಿಸಿದ ಷೇರುದಾರರು

ಮದ್ದೂರು: ಇಲ್ಲಿನ ಟಿಎಪಿಸಿಎಂಎಸ್‌ಗೆ ಭಾನುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಷೇರುದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಗೆ ಆರಂಭಗೊಂಡ ಚುನಾವಣೆಯಲ್ಲಿ ಮದ್ದೂರು ನಗರ, ಕಸಬಾ, ಅತಗೂರು, ಕೊಪ್ಪ ಮತ್ತು ಸಿ.ಎ .ಕೆರೆ ಹೋಬಳಿ ವ್ಯಾಪ್ತಿಯ ಮತದಾರರಿಗೆ ಏರ್ಪಡಿಸಿದ್ದ ಪ್ರತ್ಯೇಕ ಬೂತ್‌ನಲ್ಲಿ ಮತದಾನ ಜರುಗಿತು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಚುನಾವಣಾ ಕಣ ರಂಗೇರಿತ್ತು.

ಬಿಗುವಿನ ವಾತಾವರಣ: ಮಧ್ಯಾಹ್ನ 12 ಗಂಟೆ ಸುಮಾರಿಗೆ ಟಿಎಪಿಸಿಎಂಎಸ್ ನೌಕರನೊಬ್ಬ ನಕಲಿ ಮತದಾನಕ್ಕೆ ವ್ಯಕ್ತಿಯೊಬ್ಬನಿಗೆ ಗುರುತಿನ ಚೀಟಿ ನೀಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಕಾರ್ಯಕರ್ತರನ್ನು ಸಮಾಧಾನಗೊಳಿಸಿ ನೌಕರನನ್ನು ಠಾಣೆಗೆ ಕರೆದೊಯ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಪರಿಸ್ಥಿತಿ ಹತೋಟಿಗೆ ತಂದು ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಟ್ಟರು. ಮೂರು ಪಕ್ಷಗಳ ಕಾರ್ಯಕರ್ತರ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಹಾಗೂ ಶಾಸಕ ಕೆ.ಎಂ.ಉದಯ್ ಪಕ್ಷದ ಕಾರ್ಯಕರ್ತರೊಂದಿಗೆ ಮಾಹಿತಿ ಪಡೆದರು.

ಒಟ್ಟು 3506 ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ 3225 ಮಂದಿ ಮತದಾನ ಮಾಡುವ ಮೂಲಕ ಶೇ. 92..73 ಮತದಾನವಾಯಿತು. ತಡರಾತ್ರಿಯಾದರೂ ಮತ ಎಣಿಕೆ ಮುಂದುವರಿದಿತ್ತು.