ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಮುಡಿ ಬ್ರಹ್ಮೋತ್ಸವದ ಆಹ್ವಾನ ಪತ್ರಿಕೆ. 
ಮಂಡ್ಯ

ವೈರಮುಡಿ ಬ್ರಹ್ಮೋತ್ಸವಕ್ಕೆ ತ.ನಾಡಿನ ಪ್ರಾಯೋಜಕತ್ವ?

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ಆಹ್ವಾನಪತ್ರ ಹಂಚಿಕೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವೆಂದ ಡಿಸಿ
ಮೇಲುಕೋಟೆ: ವಿಶ್ವವಿಖ್ಯಾತ ಚೆಲುವನಾರಾಯಣಸ್ವಾಮಿ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಖಾಸಗಿಯವರಿಂದ ಅದರಲ್ಲೂ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಪ್ರಾಯೋಜಕತ್ವ ನೀಡಿದ್ದಾರೆನ್ನುವ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.
ಈ ಸಂಬಂಧ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಡಾ.ಕುಮಾರ, ಸರ್ಕಾರದ ವತಿಯಿಂದಲೇ ಉತ್ಸವ ನಡೆಯುತ್ತಿದೆ. ಅಧಿಕೃತವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಅನುಮೋದನೆ ಆಗದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ದರಿಂದ ಯಾರು ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಏನಿದು ವಿವಾದ?: ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ಮಾ.23ರಿಂದ ಏ.4ರವರೆಗೆ ನಡೆಯಲಿದೆ. ಈ ನಡುವೆ ಕರ್ನಾಟಕ ಸರ್ಕಾರದ ಚಿಹ್ನೆಯಿರುವ ಆಹ್ವಾನಪತ್ರಿಕೆಯಲ್ಲಿ ಪ್ರತಿದಿನದ ಕಾರ್ಯಕ್ರಮದ ಪ್ರಾಯೋಜಕತ್ವದ ಬಗ್ಗೆ ಕೆಲವರ ಹೆಸರು ಮುದ್ರಿಸಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಆದರೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ಪತ್ರಿಕೆ ಬಿಡುಗಡೆಯಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಮುಡಿ ಜಾತ್ರೆಯ ಆಹ್ವಾನಪತ್ರಿಕೆ ಜಿಲ್ಲಾಧಿಕಾರಿಗಳಿಂದ ಮತ್ತು ಧಾರ್ಮಿಕದತ್ತಿ ಇಲಾಖೆಯಿಂದ ಅನುಮೋದನೆಯಾಗಿಲ್ಲ ಎಂದು ಈಗಾಗಲೇ ಜಿಲ್ಲಾಡಳಿತ ಖಚಿತಪಡಿಸಿದೆ. ಆದರೆ ಈಗ ಹರಿದಾಡುತ್ತಿರುವ ಆಹ್ವಾನಪತ್ರಿಕೆಯಲ್ಲಿ ಪ್ರಖ್ಯಾತ ರಥೋತ್ಸವ, ತೆಪ್ಪೋತ್ಸವ, ಕಲ್ಯಾಣೋತ್ಸವ ಸೇರಿದಂತೆ ಎಲ್ಲ ಉತ್ಸವಕ್ಕೂ ಒಬ್ಬರ ಪ್ರಾಯೋಜಕರ ಹೆಸರು ಇದೆ. ಇದು ಚರ್ಚೆಯಾಗುತ್ತಿದೆ.
ವೈರಲ್ ಆಗಿರುವ ಪತ್ರಿಕೆ ಅಧಿಕೃತ ಅಲ್ಲ: ವಿವಾದ ಕುರಿತಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಕುಮಾರ, ಪ್ರಾಯೋಜಕತ್ವದ ಮಾಹಿತಿಯುಳ್ಳ ಆಹ್ವಾನ ಪತ್ರಿಕೆ ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇವಾಲಯದ ಕೆಲವು ಭಕ್ತರು ಸ್ಪಾನ್ಸರ್ ವಹಿಸಿಕೊಳ್ಳುವುದಾಗಿ ವ್ಯವಸ್ಥಾಪನಾ ಸಮಿತಿಗೆ ತಿಳಿಸಿದ್ದಾರೆ. ಅವರು ಸ್ಪಾನ್ಸರ್ ಬಗ್ಗೆ ಚರ್ಚೆ ಮಾಡಿದ್ದಾರೆ. ನಮ್ಮ ಗಮನಕ್ಕೆ ಕೂಡ ಈ ವಿಚಾರ ಬಂದಿದೆ. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇನ್ನೂ ಮುದ್ರಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರಿಕೆ ಅಧಿಕೃತ ಅಲ್ಲವೆಂದು ಸ್ಪಷ್ಟಪಡಿಸಿದರು.
ಸ್ಪಾನ್ಸರ್ ಕೊಡುವ ಭಕ್ತರು ಮುಂದೆ ಬಂದರೆ ಅಭ್ಯಂತರ ಇಲ್ಲ. ಅವರಿಗೆ ಅಧಿಕೃತವಾಗಿ ಪತ್ರ ಕೂಡ ಕೊಡುತ್ತೇವೆ. ಆದರೆ ಪ್ರಾಯೋಜಕರ ಹೆಸರನ್ನು ನಾವು ಆಹ್ವಾನ ಪತ್ರಿಕೆಯಲ್ಲ ಹಾಕಲ್ಲ. ಆದ್ದರಿಂದ ಇದು ಯಾರೋ ದುರುದ್ದೇಶವಾಗಿ ಮಾಡಿರುವ ಕೆಲಸ. ಅಧಿಕೃತ ಆಹ್ವಾನ ಪತ್ರಿಕೆ ಸದ್ಯದಲ್ಲೇ ಬರುತ್ತದೆ. ಭಕ್ತರು ಪ್ರಾಯೋಜಕತ್ವ ಕೊಡಲು ಇಚ್ಛೆಪಟ್ಟರೆ ನಿಯಮದಲ್ಲಿ ಅವಕಾಶ ಇದೆ. ನಾವು ಪರಿಶೀಲನೆ ಮಾಡಿ ನಂತರ ಅವಕಾಶ ನೀಡಲಾಗುವುದು ಎಂದಿದ್ದಾರೆ.
ಮೇಲುಕೋಟೆ ವೈರಮುಡಿ ಉತ್ಸವವನ್ನು ಈ ವರ್ಷ ಕೂಡ ಸರ್ಕಾರವೇ ಮಾಡುತ್ತಿದೆ. ಪ್ರತಿ ವರ್ಷ ಮಾಡುವ ಕೆಲಸದಲ್ಲಿ ಯಾವುದೇ ಕಡಿತ ಮಾಡಿಲ್ಲ. ದೇವಸ್ಥಾನದಿಂದ 35 ಲಕ್ಷ ರೂ. ಅನುದಾನ ಇಡಲಾಗಿದೆ. ಸರ್ಕಾರ ವಿಶೇಷ ಅನುದಾನ ಕೊಡುತ್ತಿದೆ. ಕಳೆದ ವರ್ಷ 1.5 ಕೋಟಿ ರೂ ಅನುದಾನ ಕೊಡಲಾಗಿತ್ತು. ಈ ವರ್ಷ 1 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೆ 1.35 ಕೋಟಿ ರೂ. ನಮ್ಮ ಬಳಿ ಇದೆ. ಆದ್ದರಿಂದ ನಾವು ಪ್ರಾಯೋಜಕರ ಬಳಿ ಹೋಗಿಲ್ಲ, ನಮಗೆ ಅವಶ್ಯಕತೆ ಇಲ್ಲ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಹ್ವಾನ ಪತ್ರಿಕೆ ಬಗ್ಗೆ ಪರಿಶೀಲಿಸಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.