ಮಳವಳ್ಳಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಧನುಷ್ ಮಾತನಾಡಿದರು. ಇಒ ಶ್ರೀನಿವಾಸ್, ಯೋಜನಾಧಿಕಾರಿ ದೀಪು ಇದ್ದರು. 
ಮಂಡ್ಯ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ತಾಪಂ ಆಡಳಿತಾಧಿಕಾರಿ ಎಸ್.ಧನುಷ್ ಸೂಚನೆ
  • ಮಾಸಿಕ ಪ್ರಗತಿ ಪರಿಶೀಲನಾ ಸಭೆ
ಮಳವಳ್ಳಿ: ತಾಲೂಕು ವ್ಯಾಪ್ತಿಯಲ್ಲಿ ಮಳೆ ಅಭಾವದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿರುವ ಸಾಧ್ಯತೆ ಇರುವುದರಿಂದ ಸಮಸ್ಯೆ ನಿವಾರಣೆಗೆ ಪೂರಕ ಸಿದ್ಧತೆ ಮಾಡಿಕೊಳ್ಳುವಂತೆ ತಾಪಂ ಆಡಳಿತಾಧಿಕಾರಿ ಎಸ್.ಧನುಷ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆ ಹಾಗೂ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಸಿಲಿನ ತಾಪಮಾನಕ್ಕೆ ಅಂತರ್ಜಲ ಕುಸಿತಗೊಂಡು ಬೋರ್‌ವೆಲ್‌ಗಳಲ್ಲಿ ಈಗಾಗಲೇ ನೀರಿನ ಕೊರತೆ ಉಂಟಾಗುತ್ತಿದ್ದು, ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಡಕಾಗಂತೆ ಪೂರ್ವನಿಯೋಜಿತ ಸಿದ್ಧತೆಗಳನ್ನು ಮಾಡಿಕೊಳ್ಳಲು ಗ್ರಾ.ಪಂ. ಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.
ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿರುವುದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದರ ಜತೆಗೆ ಶಾಲೆಗಳಲ್ಲಿ ಮೂಲ ಸೌಕರ್ಯ ನೀಡಬೇಕು. ಸರ್ಕಾರದಿಂದ ಬೇರೆನಾದರೂ ಸೌಲಭ್ಯದ ಅಗತ್ಯವಿದ್ದ ಪೂರಕ ವರದಿ ನೀಡುವಂತೆ ಬಿಇಒ ಗೆ ಸೂಚನೆ ನೀಡಿದರು. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹಾಗೂ ಇತರೆ ಅಭಿವೃದ್ಧಿ ಕೆಲಸಗಳಿಗೆ ಈಗಾಗಲೇ ಬಿಡುಗಡೆಯಾಗಿರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಿಳಂಬವಾಗುತ್ತಿದ್ದರೇ ನಮಗೆ ವರದಿ ನೀಡುವಂತೆ ಸಲಹೆ ನೀಡಿದರು.
ತಾಪಂ ಮತ್ತು ಜಿಲ್ಲಾ ಪಂಚಾಯಿತಿಗೆ ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಆರೋಪಗಳಿಗೆ ಅವಕಾಶ ಕಲ್ಪಿಸಿ ಕೊಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು. ನೀರಿನ ಪರೀಕ್ಷೆಗೆ ಕಳುಹಿಸಿ ವರದಿ ತರಿಸಿ ಕೊಂಡು ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಿ ಎಂದು ಆಡಳಿತಾಧಿಕಾರಿ ಎಸ್.ಧನುಷ್ ಸೂಚನೆ ನೀಡಿದರು.
ಪಿಆರ್‌ಡಿ ಇಂಜಿನಿಯರ್ ಅಪ್ಪಣ್ಣ ಮಾತನಾಡಿ, ತಾಲೂಕಿನ ವ್ಯಾಪ್ತಿಯ ತಾಪಂ ಅನುದಾನದಲ್ಲಿ 22, ಜಿಲ್ಲಾ ಪಂಚಾಯಿತಿ ಅನುದಾನದ 14 ಅಂಗನವಾಡಿ ಕೇಂದ್ರಗಳ ದುರಸ್ತಿ ಕಾರ್ಯ ನಡೆದಿದೆ. ಕರೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು, ಕೆಲವು ಪ್ರಗತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದರು.
ಸಿಡಿಪಿಒ ಸಿ.ಇ. ನಂಜಮ್ಮಣಿ ಮಾತನಾಡಿ, ತಾಲೂಕಿನಲ್ಲಿ 385 ಅಂಗನವಾಡಿ ಕೇಂದ್ರಗಳಿದ್ದು, 251 ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಮತ್ತು 14 ಪಂಚಾಯಿತಿ ಹಾಗೂ ಸಮುದಾಯ ಭವನಗಳಲ್ಲಿ 71 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಎಲ್ಲ ಸವಲತ್ತು ಸಮರ್ಪಕವಾಗಿ ಪೂರೈಸುವ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೂ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಪಂ ಕುಡಿಯುವ ನೀರು ವಿಭಾಗದ ಇಂಜಿನಿಯರ್ ರಂಗಸ್ವಾಮಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ತಾ.ಪಂ., ಜಿ.ಪಂ.ನಿಂದ ಯಾವುದೇ ಅನುದಾನ ನೀಡಿಲ್ಲದ ಹಿನ್ನೆಲೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. 60 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 8 ರಿಪೇರಿ, 4 ಸ್ಥಳಾಂತರ ಹಾಗೂ ಉಳಿದ ಘಟಕಗಳು ಸುಸ್ತಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ನಿರ್ವಹಣೆಗಾಗಿ ಪ್ರತಿ ಗ್ರಾಪಂ ಗೆ 3 ಸಾವಿರ ನಿರ್ವಹಣೆ ವೆಚ್ಚ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಹಳ್ಳಿಗಳಲ್ಲಿ ಗ್ರಾಮದ ರಸ್ತೆ ಅಗೆದು ಬಿಟ್ಟಿರುವುದನ್ನು ಮುಚ್ಚಿಸುವ ಕೆಲಸ ಮಾಡಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಇರುವ 36 ಗ್ರಾಮಗಳನ್ನು ಗುರುತಿಸಿ ಖಾಸಗಿ ಬೋರ್‌ವೆಲ್ ವಶಕ್ಕೆ ಪಡೆದು ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎದುರಾಗುವ ನೀರಿನ ಸಮಸ್ಯೆಗಳ ನಿವಾರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಬಂದರೆ ಅಷ್ಟೊಂದು ಸಮಸ್ಯೆ ತಲೆದೊರುವುದಿಲ್ಲ ಎಂದರು.
ಬಿಇಒ ಉಮಾ ಮಾತನಾಡಿ, ತಾಲೂಕಿನ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಸೇರಿದಂತೆ ಅಗತ್ಯ ಕೊಠಡಿಗಳ ನಿರ್ಮಾಣಕ್ಕೆ ಶಾಸಕರ ಕಾಳಜಿಯಿಂದ 50 ಕೋಟಿ ರೂ. ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿದೆ. 208 ಶಿಕ್ಷಕರ ಕೊರತೆ ಇದ್ದು, ಇವುಗಳ ಪೈಕಿ 160 ಅತಿಥಿ ಶಿಕ್ಷಕರ ನೇಮಕಾತಿಗೆ ಇಲಾಖೆ ಅನುಮೋದನೆ ದೊರೆತಿದ್ದು, ಇನ್ನೂ 48 ಶಿಕ್ಷಕರ ಕೊರತೆ ಇದೆ ಎಂದರು. ಪ್ರಸ್ತುತ ವರ್ಷ 62 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಅನುಮತಿ ದೊರೆತಿದೆ. ಮಕ್ಕಳ ದಾಖಲಾತಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ.
ಮಕ್ಕಳ ಮನೆ ದಾಖಲಾತಿಯನ್ನು ಮಾಡಿಸಲಾಗುತ್ತಿದೆ ಎಂದ ಅವರು, ಕೆಲವು ಖಾಸಗಿ ಶಾಲೆಗಳು ಮಕ್ಕಳ ಪಾಲಕರಿಗೆ ವಿವಿಧ ಆಮೀಷ ನೀಡಿ ಸರ್ಕಾರಿಶಾಲೆಗಳ ಮಕ್ಕಳನ್ನು ಟಿಸಿ ಪಡೆಯುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತೆಡೆಯಲು ಪಾಲಕರಲ್ಲಿ ಜಾಗೃತಿ ಮೂಡಿಸುವಂತೆ ನಮ್ಮ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದರು.
ಆದರೇ ತಾಲೂಕು ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕೊಠಡಿಗಳ ಅಗತ್ಯವಿದ್ದು, ಪೀಠೋಪಕರಣ, ಗಣಕಯಂತ್ರಗಳು ಕೆಟ್ಟಿವೆ. ದಾಸ್ತಾನು ಕೊಠಡಿಗಳ ಅಗತ್ಯ ವಿದೆ ಎಂದು ಮನವಿ ಮಾಡಿದರು.
ಅಗತ್ಯವಿರುವ ಕೆಲಸಗಳ ಬಗ್ಗೆ ವರದಿ ಸಿದ್ದಪಡಿಸಿ ಕಳುಹಿಸಿದರೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಆಡಳಿತಾಧಿಕಾರಿ ಎಸ್.ಧನುಷ್‌ತಿಳಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ಬಾಗಿಯಾಗಿ ತಮ್ಮ ಇಲಾಖೆಗಳ ಪ್ರಗತಿ ಮಾಹಿತಿಗಳನ್ನು ವಿವರಿಸಿದರು. ತಾ.ಪಂ. ಇಒ ಶ್ರೀನಿವಾಸ್, ಯೋಜನಾಧಿಕಾರಿ ದೀಪು ಇದ್ದರು.