ಮಳವಳ್ಳಿ ಪಟ್ಟಣದಲ್ಲಿ ಪೂರ್ವ ಸಿದ್ಧತೆಯನ್ನು ಗುರುವಾರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪರಿಶೀಲಿಸಿದರು. ಚನ್ನಬಸವ ಸ್ವಾಮೀಜಿ, ಕುಮಾರ, ಮಲ್ಲಿಕಾರ್ಜುನ ಬಾಲದಂಡಿ ಇದ್ದರು.
- 15 ರಿಂದ 22 ರವರೆಗೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ಹಿನ್ನೆಲೆ
ಮಳವಳ್ಳಿ : ಪಟ್ಟಣದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಡಿ.15 ರಿಂದ 22 ರವರೆಗೆ ನಡೆಯುವ ಹಿನ್ನೆಲೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ಕುಮಾರ ಗುರುವಾರ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.
ಡಿ.16ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಸಚಿವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕಾರ್ಯಕ್ರಮದ ಸಿದ್ಧತೆಹಾಗೂ ಶಿಷ್ಟಾಚಾರ ಪಾಲನೆಯ ಮಾಹಿತಿಯನ್ನು ಸುತ್ತೂರು ಶ್ರೀಳಿಗೆ ವಿವರಿಸಿದರು.
ಮಾರೆಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹೆಲಿಪ್ಯಾಡ್ ಪ್ರದೇಶದಲ್ಲಿ ಮೂರು ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಸ್ಥಳಗಳನ್ನು ಸಿದ್ಧಪಡಿಸಲಾಗಿದೆ. ಡಿ.14 ರಂದು ಕೇಂದ್ರದಿಂದ ಪರಿಶೀಲನಾ ತಂಡವು ಆಗಮಿಸಲಿರುವುದರಿಂದ ಹೆಲಿಪ್ಯಾಡ್ ಅನ್ನು ಸಮತಟ್ಟಾಗಿಸಿ ನಿಯಮಾನುಸಾರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಧೂಳು ರಹಿತ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಗ್ರೀನ್ ರೂಂ ನಿರ್ಮಾಣ ಕುರಿತು ಪರಿಶೀಲನಾ ತಂಡದ ಅಭಿಪ್ರಾಯದ ಮೇರೆಗೆ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಮಾರ್ಗಸೂಚಿಯನ್ವಯ ಹೈಸ್ಪೀಡ್ ಇಂಟರ್‌ನೆಟ್ ಮತ್ತು ದೂರವಾಣಿ ಸಂಪರ್ಕ ಕಲ್ಪಿಸುವುದರ ಜತೆಗೆ ರಾಷ್ಟ್ರಪತಿ ಪ್ರೋಟೋಕಾಲ್ ಅನುಸಾರ ವೇದಿಕೆ, ಕುಳಿತುಕೊಳ್ಳುವ ಆಸನ, ವೇದಿಕೆ ಬಳಿ ತುರ್ತು ವೈದ್ಯಕೀಯ ತಂಡ ಇರುವಂತೆ ನೋಡಿಕೊಳ್ಳಲಾಗಿದೆ. ರಾಷ್ಟ್ರಪತಿ ಹಾಗೂ ಭದ್ರತಾ ಸಿಬ್ಬಂದಿಯ ವಾಹನ ನಿಲುಗಡೆ ಪ್ರದೇಶವನ್ನು ಪರಿಶೀಲಿಸಿ ಯಾವುದೇ ಸರ್ಕಾರಿ, ಖಾಸಗಿ ವಾಹನಗಳು ಸದರಿ ಪ್ರದೇಶದಲ್ಲಿ ನಿಲ್ಲದಂತೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕುಮಾರ ಶ್ರೀಗಳಿಗೆ ವಿವರಣೆ ನೀಡಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ, ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳ ಹಾಗೂ ರಾಷ್ಟ್ರಪತಿ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತೆ ಇರಬೇಕು. ಪ್ರೋಟೋಕಾಲ್ ಕಾಪಾಡುವ ದೃಷ್ಟಿಯಿಂದ ಎಲ್ಲ ಇಲಾಖೆ ಅಧಿಕಾರಿಗಳು ಸಮಯ ಪಾಲನೆ ಮಾಡಿ ದೋಷರಹಿತವಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಕನಕಪುರ ದೇಗುಲ ಮಠಾಧ್ಯಕ್ಷರಾದ ಮುಮ್ಮಡಿ ನಿರ್ವಾಣಸ್ವಾಮೀಜಿ, ಚನ್ನಬಸವಸ್ವಾಮೀಜಿ, ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಮಾಜಿ ಶಾಸಕ ಡಾ ಕೆ.ಅನ್ನದಾನಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್ಪಿ ಯಶವಂತ್ ಕುಮಾರ್,ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಜಯಂತಿ ಮಹೋತ್ಸವದ ವಿವಿದ ಸಮಿತಿಗಳ ಪದಾಧಿಕಾರಿಗಳು ಇದ್ದರು.