ಕೃಷ್ಣರಾಜಸಾಗರ ಅಣೆಕಟ್ಟೆ ಹಿನ್ನೀರಿನ ಪ್ರದೇಶಗಳ ಜಂಟಿ ಸವೇ ಮಾಡುತ್ತಿರುವುದು. 
ಮಂಡ್ಯ

ಹಿನ್ನೀರಿನಲ್ಲಿ ಒತ್ತುವರಿ ತೆರವಿಗೆ ಸರ್ವೇ: ಅಧಿಕಾರಿಗಳಿಂದ ಗಡಿ ಗುರುತು ಪ್ರಕ್ರಿಯೆ ಚುರುಕು

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಕೃಷ್ಣರಾಜಸಾಗರ ಹಿನ್ನೀರಿನಲ್ಲಿ ಒತ್ತುವರಿ
  • ತೆರವಿಗೆ ಡಿಸಿಎಂ ಆದೇಶ
  • ಕಂದಾಯ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಸರ್ವೇ
ದೀಪಕ್ ಕೆ.ಆರ್.ಸಾಗರ
ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಭೂ ಒತ್ತುವರಿಗೆ ಸಂಬಂಧಿಸಿದಂತೆ ಕೊನೆಗೂ ಸರ್ವೇ ಪ್ರಕ್ರಿಯೆ ಆರಂಭಗೊಂಡಿದೆ. ಮಂಂಡ್ಯ ಮತ್ತು ಮೈಸೂರು ಜಿಲ್ಲಾಡಳಿತದ ಸೂಚನೆ ಮೇರೆಗೆ ಕಂದಾಯ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿ ಸರ್ವೇ ನಡೆಸುತ್ತಿದ್ದಾರೆ.
ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿನ ದಾಖಲೆಗಳಂತೆ ಸರ್ವೇ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು 130 ಅಡಿ ಮಟ್ಟಕ್ಕೆ ಹಿಂದಿನ ದಾಖಲೆಯಂತೆ ಗಡಿ ಗುರುತು ಮಾಡಿ ದಾಖಲೆ ಮಾಡುತ್ತಿರುವ ಪ್ರಕ್ರಿಯೆ ಚುರುಕುಗೊಂಡಿದೆ. ಹಿನ್ನೀರಿನ ತೀರದಲ್ಲಿ ಒತ್ತುವರಿ ಮಾಡಿದ್ದರಿಂದ ಅಣೆಕಟ್ಟೆಯಲ್ಲಿ ಸುಮಾರು 2 ಟಿ.ಎಂ.ಸಿ ಯಷ್ಟು ನೀರು ಕಡಿಮೆ ಸಂಗ್ರಹವಾಗುತ್ತಿರುವ ಮಾಹಿತಿ ಲಭ್ಯವಾಗಿದೆ.
ಕೆಆರ್‌ಎಸ್ ಹಿನ್ನೀರಿನಲ್ಲಿ ಭೂ ಒತ್ತುವರಿ ಪ್ರಕರಣ ಹೆಚ್ಚುತ್ತಿರುವುದರಿಂದ ಕ್ರಮಕ್ಕೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಪತ್ರ ಬರೆದಿದ್ದರು. ಮಾತ್ರವಲ್ಲದೆ ಐಷಾರಾಮಿ ರೆಸಾರ್ಟ್ ನಿರ್ಮಾಣ ಹಾಗೂ ಭೂ ಒತ್ತುವರಿಯಿಂದಾಗಿ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಹೀಗಾಗಿ ಭೂ ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಒತ್ತಾಯಿಸಿದ್ದರು. ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕು ಮತ್ತು ಮೈಸೂರು ಜಿಲ್ಲೆಯ ಕೆ.ಆರ್.ನಗರ, ಮೈಸೂರು ಮತ್ತು ಹುಣಸೂರು ತಾಲೂಕಿನಲ್ಲಿ ಜಲಾಶಯದ ಹಿನ್ನೀರಿನ ಅಂಚಿನಲ್ಲಿರುವ ಭೂ ಮಾಲೀಕರು ಭೂ ಒತ್ತುವರಿ ಮಾಡುತ್ತಿರುವುದು ಮತ್ತು ಐಷಾರಾಮಿ ರೆಸಾರ್ಟ್‌ಗಳ ನಿರ್ಮಾಣ ಮಾಡುತ್ತಿದ್ದಾರೆ. ಹಿನ್ನೀರಿನ ಪ್ರದೇಶದಲ್ಲಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ಸಂಗ್ರಹಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ನಾಲಾ ಕೊನೆ ಭಾಗದ ಮಳವಳ್ಳಿ, ಮದ್ದೂರು ಭಾಗದ ಸಾವಿರಾರು ಅಚ್ಚುಕಟ್ಟು ಪ್ರದೇಶದ ರೈತರಿಗೆ ವ್ಯವಸಾಯಕ್ಕೆ ನೀರೊದಗಿಸಲು ಹಾಗೂ ಕುಡಿಯುವ ನೀರಿಗಾಗಿ ತೊಂದರೆ ಉಂಟಾಗುವ ಸಂಭವವಿರುತ್ತದೆ.
ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಪ್ರದೇಶವು 26,640 ಎಕರೆಗಳಿದ್ದು, ಜಲಾಶಯದಿಂದ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಸುಮಾರು 2.76 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲಾಗುತ್ತಿದೆ. ಮೈಸೂರು ನಗರಕ್ಕೆ 1.579 ಟಿ.ಎಂ.ಸಿ ಹಾಗೂ ಬೆಂಗಳೂರು, ಇನ್ನಿತರ ನಗರ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಲಾಗುತ್ತಿದೆ. ವಿದ್ಯುತ್ ಉತ್ಪಾದನಾ ಘಟಕಗಳಿಗೆ ನೀರನ್ನು ಬಳಕೆ ಮಾಡಲಾಗುತ್ತದೆ. ಆದರೆ, ಹಿನ್ನೀರಿನ ಪ್ರದೇಶದಲ್ಲಿ ಭೂ ಒತ್ತುವರಿ ಆಗುತ್ತಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಂಠಿತವಾಗಲಿದ್ದು, ಇದರಿಂದ ನೀರಿನ ಸಮಸ್ಯೆ ಉಲ್ಬಣಿಸಲಿದೆ. ಹೀಗಾಗಿ ಜಲಾಶಯದ 130 ಅಡಿಗಳ ನಕ್ಷೆಗಳನ್ನು ನೀರಾವರಿ ಇಲಾಖೆಯಿಂದ ಪಡೆದು ಈ ವಿಷಯದ ಕುರಿತಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿ, ಕಂದಾಯ ಇಲಾಖೆ, ಭೂ ದಾಖಾಲಾತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಸರ್ವೆ ಕಾರ್ಯ ನಡೆಸಿ ಒತ್ತುವರಿ ಇದ್ದಲ್ಲಿ ಒತ್ತುವರಿಯನ್ನು ತೆರವುಗೊಳಿಸಲು, ಅಣೆಕಟ್ಟೆಯ 130 ಅಡಿಯ ಕಾಂಟೋರ್ ಗಡಿಭಾಗಕ್ಕೆ ಶಾಶ್ವತವಾಗಿ ಗಡಿ ಕಲ್ಲುಗಳನ್ನು, ಸೂಚನಾ ಫಲಕಗಳನ್ನು ಅಳವಡಿಸಲು ಸೂಕ್ತ ನಿರ್ದೇಶನ ನೀಡಬೇಕು. ಹಿನ್ನೀರಿನ ಪ್ರದೇಶದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಕಾವಲು ವ್ಯವಸ್ಥೆ ನೋಡಲು ಪೊಲೀಸ್ ಇಲಾಖೆ ಮತ್ತು ಪರಿಸರ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಗಡುವು ನೀಡಿದ್ದ ಡಿಸಿಎಂ
ಶಾಸಕರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಭೂಮಿ ಸರ್ವೇ ಮಾಡಿ ಈ ಕೂಡಲೇ ಒತ್ತುವರಿ ತೆರವುಗೊಳಿಸುವುದರ ಜತೆಗೆ ಗಡಿ ಕಲ್ಲುಗಳನ್ನು ನೆಟ್ಟು ವರದಿ ನೀಡುವಂತೆ ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿ ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನ.11ರಂದು ಆದೇಶಿಸಿದ್ದರು.
ಆದರೆ ಆದೇಶಕ್ಕೆ ಪ್ರತ್ಯುತ್ತರ ಬಾರದ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಭೂ ಒತ್ತುವರಿಗೆ ಸಂಬಂಧಿಸಿದಂತೆ ಆಗಿರುವ ಕ್ರಮದ ಬಗ್ಗೆ ಮಧ್ಯಂತರ ವರದಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಿಸುವಂತೆ ಡಿ.17ರಂದು ಮಂಡ್ಯ ಮತ್ತು ಮೈಸೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಮಾತ್ರವಲ್ಲದೆ ಇದಕ್ಕೆ ಏಳು ದಿನದ ಗಡುವು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವೇ ಪ್ರಕ್ರಿಯೆ ಆರಂಭಗೊಂಡಿದೆ.

8.014 ಚದರ ಕಿ.ಮೀ ನಷ್ಟು ಒತ್ತುವರಿ

ಕಾವೇರಿ ನೀರಾವರಿ ಅಧಿಕಾರಿಗಳ ಮಾಹಿತಿಯಂತೆ 130.993 ಚದರ ಕಿ.ಮೀ ನಷ್ಟು ಒಟ್ಟು ಹಿನ್ನ್ನೀರಿನ ಪ್ರದೇಶ ಹೊಂದಿದೆ. ಆದರೆ ಇತ್ತೀಚಿನ ವರ್ಷದಲ್ಲಿ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ವತಿಯಿಂದ ನಡೆದ ಐ.ಬಿ.ಎಸ್ ಸರ್ವೇ ಕಾರ್ಯದ ಮಾಹಿತಿಯಂತೆ 122.979 ಚದರ ಕಿ.ಮೀ ನಷ್ಟು ಮಾತ್ರ ಹಿನ್ನೀರಿ ಪ್ರದೇಶವಿದ್ದು, 8.014 ಚದರ ಕಿ.ಮೀ ನಷ್ಟು ಒತ್ತುವರಿಯಾಗಿರುವುದು ಕಂಡು ಬಂದಿತ್ತು. ಇದರಿಂದ ಅಣೆಕಟ್ಟೆಯಲ್ಲಿ ಸುಮಾರು 2 ರಿಂದ 3 ಟಿ.ಎಂ.ಸಿ ನೀರಿನ ಸಂಗ್ರಹ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ.
ಹಿನ್ನೀರಿನ ಹಲವಾರು ಗ್ರಾಮಗಳ ಜನರು ಅಕ್ರಮವಾಗಿ ದಾಖಲೆ ಸೃಷ್ಟಿಸಿ ಟನ್ ಗಟ್ಟಲೆ ಮಣ್ಣು ಸುರಿದು ಹಾಗೂ ತಡೆಗೋಡೆ ನಿರ್ಮಿಸಿ ಒತ್ತುವರಿ ಮಾಡಿಕೊಂಡಿರುವುದರ ಕುರಿತು ಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ಹಲವಾರು ದೂರು ನೀಡಿದ್ದರು. ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಸೇರಿದ ಹಲವಾರು ಕಡೆ ಹಿನ್ನೀರಿನ ಪ್ರದೇಶಗಳಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದು, ಪ್ರವಾಸಿಗರ ಆಕರ್ಷಣೆ ಮಾಡಲು ಒತ್ತುವರಿ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.
ಅಣೆಕಟ್ಟೆಯ ಗರಿಷ್ಟ ಮಟ್ಟ 124.80 ಅಡಿ ಇದ್ದರೂ ಕೂಡ ಡ್ಯಾಂ ನಿರ್ಮಾಣದ ಸಮಯದಲ್ಲಿ 125 ರಿಂದ 130 ಅಡಿಗೆ ನೀರು ನಿಂತರೆ ಸಿಗುವ ಜಾಗವನ್ನು ಅಂದೇ ಕಾನೂನಿನ ರೀತ್ಯಾ ವಶಕ್ಕೆ ಪಡೆದು ಪ್ರಾರಂಭದಿಂದ ಹಿಡಿದು ಹಿನ್ನೀರಿನ ಕೊನೆ ತನಕ ಎರಡು ಬದಿಯಲ್ಲಿ ದೊಡ್ಡ ಗುರುತಿನ ಕಲ್ಲು ನೆಟ್ಟಿದ್ದರು. ಆದರೆ ಆ ಕಲ್ಲುಗಳನ್ನು ಕಿತ್ತುಹಾಕಿ ಮಣ್ಣು ಸುರಿದು ನಕಲಿ ದಾಖಲೆ ಸೃಷ್ಠಿ ಮಾಡಿರುವುದು ಕಂಡು ಬಂದಿದೆ.
"

ಹಿನ್ನೀರಿನಲ್ಲಿ ಜಾಗ ಅತಿಕ್ರಮವಾಗಿರುವ ಹಿನ್ನಲೆಯಲ್ಲಿ ಸರ್ವೇ ನಡೆಸಿ ಗಡಿ ಗುರುತಿಸಲು ಡಿಸಿ ಅವರಿಗೆ ಡಿಸಿಎಂ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕಂದಾಯ ಮತ್ತು ಸರ್ವೇ ಇಲಾಖೆ ನೇತೃತ್ವದಲ್ಲಿ ಸರ್ವೇ ಕೆಲಸ ಪ್ರಾರಂಭವಾಗಿದೆ. ಮೊದಲಿಗೆ ಗಡಿ ಗುರುತಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು. ಈಗ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ವೇ ಕೆಲಸ ಪ್ರಾರಂಭಿಸಲಾಗಿದ್ದು, ಮೈಸೂರು ವಿಭಾಗದಲ್ಲಿ ಕೂಡ ಸರ್ವೇ ಕೆಲಸ ಹುಣಸೂರು ವಿಭಾಗದ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆಯಲಿದೆ.