ಮದ್ದೂರು ನಗರದ ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ಕಲ್ಪಿಸಲಾಗಿರುವ ಮೂಲ ಸೌಲಭ್ಯಗಳ ಸಮಗ್ರ ಪರಿಶೀಲನೆ ನಡೆಸಿದರು. ಚಂದ್ರಶೇಖರ್, ಶಿವಕುಮಾರ್ ಬಿರಾದಾರಾ ಇದ್ದರು. 
ಮಂಡ್ಯ

ವಸತಿನಿಲಯಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆ

ಮದ್ದೂರು: ನಗರದ ಬಿಸಿಎಂ ಬಾಲಕಿಯರ ವಸತಿನಿಲಯಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ಕಲ್ಪಿಸಲಾಗಿರುವ ಮೂಲ ಸೌಲಭ್ಯಗಳ ಸಮಗ್ರ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಹಾರದ ಗುಣಮಟ್ಟ, ಕುಡಿಯುವ ನೀರು, ಸ್ವಚ್ಛತೆ, ಶೌಚಗೃಹ ಹಾಗೂ ಸ್ನಾನಗೃಹ, ಸ್ಯಾನಿಟರಿ ಪ್ಯಾಡ್‌ಗಳ ಲಭ್ಯತೆ, ಆರೋಗ್ಯ, ವಸತಿ, ವಿದ್ಯುತ್, ಸುರಕ್ಷತೆ, ಗ್ರಂಥಾಲಯ ಹಾಗೂ ಓದುವ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು ಹಾಗೂ ಅಗತ್ಯತೆಗಳ ಕುರಿತು ಮಾಹಿತಿ ಪಡೆದರು.
ವಸತಿನಿಲಯದಲ್ಲಿ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ, ಸ್ವಚ್ಛತೆ ಮತ್ತು ನೈರ್ಮಲ್ಯ, ಅಗತ್ಯ ಪ್ರಮಾಣದಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಲಭ್ಯತೆ ಹಾಗೂ ಉತ್ತಮ ಓದುವ ವಾತಾವರಣ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರೊಂದಿಗೆ ಜಿಲ್ಲಾಧಿಕಾರಿ ಊಟ ಮಾಡಿ, ಆಹಾರದ ಗುಣಮಟ್ಟ ಹಾಗೂ ವ್ಯವಸ್ಥೆಯ ಕುರಿತು ವಿದ್ಯಾರ್ಥಿನಿಯರಿಂದ ನೇರವಾಗಿ ಮಾಹಿತಿ ಪಡೆದರು.
ವಿದ್ಯಾರ್ಥಿನಿಯರ ಸುರಕ್ಷತೆ, ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿ, ವಸತಿ ನಿಲಯದ ವ್ಯವಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯೋಜನಾ ನಿರ್ದೇಶಕರು, ಜಿಲ್ಲಾ ನಗರ ಅಭಿವೃದ್ಧಿ ಕೋಶ ಚಂದ್ರಶೇಖರ್, ತಹಸೀಲ್ದಾರ್ ಶಿವಕುಮಾರ್ ಬಿರಾದಾರಾ ಹಾಗೂ ಬಿಸಿಎಂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.