ಮಂಡ್ಯದಲ್ಲಿ ಆಯೋಜಿಸಿದ್ದ ಬೇಸಿಗೆ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
- ಏಳು ಗಂಟೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಯಾಗಲಿ
- ಬೇಸಿಗೆ ನಿರ್ವಹಣೆ ಕುರಿತ ಸಭೆ
ಮಂಡ್ಯ: ಜಿಲ್ಲೆಯಲ್ಲಿ ಬೇಸಿಗೆ ಬೆಳೆಗೆ ತೊಂದರೆಯಾಗದಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ಗುಣಮಟ್ಟದ ನಿರಂತರ ವಿದ್ಯುತ್ ಸರಬರಾಜು ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೇಸಿಗೆ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯುಂಟಾಗದಂತೆ ಅಗತ್ಯ ಕ್ರಮ ವಹಿಸಬೇಕು. ಅಂತೆಯೇ ಕುಡಿಯುವ ನೀರಿನ ಯೋಜನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದರು.
ಕಾವೇರಿ ಮತ್ತು ಹೇಮಾವತಿ ನದಿಯ ಮೂಲಕ ಕುಡಿಯುವ ನೀರನ್ನು ಎತ್ತುವಳಿ ಮಾಡುವ ಹಿನ್ನೆಲೆಯಲ್ಲಿ ನದಿಯ ತೀರದಲ್ಲಿ ಅನಧಿಕೃತವಾಗಿ ಹಾಕಿಕೊಂಡಿರುವ ಅಕ್ರಮ ಪಂಪ್‌ಸೆಟ್ ತೆರವುಗೊಳಿಸಬೇಕು. ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಿಕೊಳ್ಳುತ್ತಿರಬೇಕು. ಕುಡಿಯುವ ನೀರಿನ ಯೋಜನೆಯನ್ನು ಹೊರತುಪಡಿಸಿ ಇತರೆ ಗ್ರಾಮಗಳಲ್ಲಿನ ಕೊಳವೆ ಬಾವಿಗಳು, ಪಂಪ್‌ಸೆಟ್ ಮತ್ತು ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.
ಈಗಾಗಲೇ ತಾಲೂಕು ಮಟ್ಟದಲ್ಲಿ ನೀರಿನ ಸಮಸ್ಯೆಯ ಕುರಿತು ಕಂಟ್ರೋಲ್ ರೂಂ ಆರಂಭಿಸಿದ್ದು, 24*7 ಸಮರ್ಥವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಲೋಡ್ ಮ್ಯಾನೇಜ್ಮೆಂಟ್ ವ್ಯವಸ್ಥೆಯನ್ನು ಸುಧಾರಿಸಬೇಕು. ಗ್ರಾಮೀಣ ಭಾಗಗಳಲ್ಲಿ ರೈತರಿಗೆ ನೀರಾವರಿಗೆ ಸಮಸ್ಯೆ ಉಂಟಾಗದಂತೆ ಸಂಬಂಧಿತ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬೇಸಿಗೆ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಎಲ್ಲ ಇಲಾಖೆಗಳು ತಕ್ಷಣ ಸ್ಪಂದಿಸಿ, ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ ಇತರರಿದ್ದರು.