ಕಿಕ್ಕೇರಿ ಹೋಬಳಿಯ ಮಾದಾಪುರದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಅಕ್ಕರೆಯ ಬೇಸಿಗೆ ಶಿಬಿರದಲ್ಲಿ ಸಂಭ್ರಮದಿಂದ ಭಾಗಿಯಾಗಿದ್ದ ಮಕ್ಕಳು.  
ಮಂಡ್ಯ

ಮಕ್ಕಳ ಮಾನಸಿಕ, ಬೌದ್ಧಿಕ ವಿಕಸನಕ್ಕೆ ಬೇಸಿಗೆ ಶಿಬಿರ ವರದಾನ

ಕಿಕ್ಕೇರಿ: ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆ ಜತೆಗೆ ಮಾನಸಿಕ, ಬೌದ್ಧಿಕ ವಿಕಸನಕ್ಕೆ ಬೇಸಿಗೆ ಶಿಬಿರ ವರದಾನವಾಗಿದೆ ಎಂದು ಪಿಡಿಒ ಸಿ. ಚಲುವರಾಜು ತಿಳಿಸಿದರು.
ಹೋಬಳಿಯ ದಬ್ಬೇಘಟ್ಟ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗ್ರಾಮೀಣ ಮಕ್ಕಳಿಗೆ ಅಕ್ಕರೆಯ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಒಂದು ತಿಂಗಳ ಕಾಲ ವಿಶೇಷವಾಗಿ ಏರ್ಪಡಿಸಿದ್ದ ಶಿಬಿರದಿಂದ ಪಾಲಕರಿಗೆ ಮಕ್ಕಳನ್ನು ಜೋಪಾನ ಮಾಡುವುದು ತಪ್ಪಿದೆ. ಬೇಸಿಗೆಯಲ್ಲಿ ಮಕ್ಕಳು ಹಳ್ಳ ಕೊಳ್ಳದಲ್ಲಿ ನೀರಿನಾಟ ಆಡುವುದು ತಪ್ಪಿ ಖುಷಿಯಾಗಿದ್ದಾರೆ ಎಂದರು.
ಮಕ್ಕಳು ದೇಶಿಯ ಕ್ರೀಡೆಗಳಾದ ಬುಗುರಿ, ಲಗೋರಿ, ಚಿಣ್ಣಿದಾಂಡು, ಮರಕೋತಿ, ಹಳ್ಳಗುಣಿ ಮಣೆಯಾಟ ಕಲಿಯಲು ಸಹಕಾರಿಯಾಗಿದೆ. ಶಿಕ್ಷಕರು ಹೇಳಿಕೊಟ್ಟ ವಿವಿಧ ಕ್ರೀಡೆ, ಓರಿಗಾಮೆ, ಹಾವು ಏಣಿ ಆಟ, ಚಿತ್ರಕಲೆ, ನಾಟಕ, ಜಾನಪದ ಗೀತೆ, ನಾಟಕದಂತಹ ವಿವಿಧ ಸಾಂಸ್ಕೃತಿಕ ಚಟುವಟಿಕೆ ಕಲಿತಿದ್ದಾರೆ. ಮಕ್ಕಳಿಗೆ ವಿವಿಧ ಪ್ರಾಣಿ, ಪಕ್ಷಿಗಳ ಪರಿಚಯ, ಪ್ರಕೃತಿಯಲ್ಲಿರುವ ವಿವಿಧ ಜಾತಿಯ ಮರಗಿಡಗಳ ಪರಿಚಯ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಿ, ಯೋಗ, ಧ್ಯಾನದಂತಹ ಚಟುವಟಿಕೆಗೆ ಮುಂದಾಗಿ. ಮನೆಯ ಮುಂದೆ, ಶಾಲಾವರಣ, ರಸ್ತೆಬದಿಯಲ್ಲಿ ಗಿಡ ನೆಟ್ಟು ಬೆಳೆಸಿ. ಇದರಿಂದ ಸಕಾಲಕ್ಕೆ ಮಳೆ, ಅಂತರ್ಜಲ ಹೆಚ್ಚಿಸಿ, ಮಣ್ಣಿನ ಸವಕಳಿ ತಪ್ಪಲಿದೆ ಎಂದು ಮಾಹಿತಿ ನೀಡಿದರು.