ಮದ್ದೂರು ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿರುವ ಬೇಸಿಗೆ ಶಿಬಿರವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ರಾಮಲಿಂಗಯ್ಯ, ಧನಂಜಯ, ಸುರೇಶ್, ಮಧುಸೂದನ್ ಇದ್ದರು.
ಮದ್ದೂರು: ಗ್ರಾಮೀಣ ಮಕ್ಕಳ ಉಲ್ಲಾಸಕ್ಕಾಗಿ ಬೇಸಿಗೆ ಶಿಬಿರಗಳನ್ನು ಆಯೋಜನೆ ಮಾಡಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸ್ಥಳೀಯ ಗ್ರಾಪಂ, ಶಾಲಾ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯೋಜಿಸಿರುವ ಬೇಸಿಗೆ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವರ್ಷವೆಲ್ಲ ಶಾಲೆಯಲ್ಲಿ ಓದು, ಪಾಠ ಪ್ರವಚನ, ಪರೀಕ್ಷೆಯೆಂದು ಹೆಚ್ಚು ತಲ್ಲೀನರಾಗಿರುತ್ತಾರೆ. ಪರೀಕ್ಷೆಯ ನಂತರ ಬರುವ ಬೇಸಿಗೆ ರಜೆಯಲ್ಲಿ ಈ ರೀತಿಯ ಬೇಸಿಗೆ ಶಿಬಿರವನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ, ಚೈತನ್ಯ ಮೂಡಲು ಹಾಗೂ ಲವಲವಿಕೆಯಿಂದ ಇರುತ್ತಾರೆ. ಆದ್ದರಿಂದಲೇ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಹಕಾರಿ ಎಂದರು.
ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಬೇಸಿಗೆಯಲ್ಲಿ ಅವರ ಪಾಲಕರು ಈಜು ಕೊಳ ಸೇರಿದಂತೆ ಹಲವಾರು ರೀತಿಯ ಮನರಂಜನಾ ಕೇಂದ್ರಗಳಿಗೆ ಸೇರಿಸಿರುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳು ಮನೆಯಲ್ಲಿಯೇ ಇರುತ್ತಾರೆ. ಆದ್ದರಿಂದ ಶಿಕ್ಷಣ ಇಲಾಖೆಯ ವತಿಯಿಂದ ಈ ಶಿಬಿರವನ್ನು ನಡೆಸುತ್ತಿರುವುದು ಒಳ್ಳೆಯ ಕೆಲಸವೆಂದರು.
ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲೇ ಆಚಾರ, ವಿಚಾರ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪಾಲಕರು ಮತ್ತು ಶಿಕ್ಷಕರು ತಿಳಿಸಬೇಕು ಎಂದರು.
ಬಿಇಒ ಧನಂಜಯ ಮಾತನಾಡಿ, ಸುಮಾರು 34 ದಿನಗಳ ಕಾಲ ನಡೆಯುವ ಈ ಶಿಬಿರವು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯುತ್ತದೆ, ಈ ವೇಳೆ ಕಲಿಕೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಗ್ರಾಮೀಣ ಕ್ರೀಡೆ, ವಿವಿಧ ಆಟಿಕೆ ಗಳನ್ನು ಆಡಿಸುವುದು ಸೇರಿರುತ್ತದೆ ಹಾಗೂ ಮಕ್ಕಳಿಗೆ ಹಣ್ಣುಗಳು ಹಾಗೂ ಜ್ಯೂಸ್ ಅನ್ನು ನೀಡಲಾಗುತ್ತದೆ ಎಂದರು.
ತಾ.ಪಂ ಇಒ ರಾಮಲಿಂಗಯ್ಯ, ತಾಪಂ ಯೋಜನಾಧಿಕಾರಿ ಸುರೇಶ್, ಪಿಡಿಒ ಮಧುಸೂದನ್, ಮುಖ್ಯ ಶಿಕ್ಷಕಿ ಆಶಾ ಸೇರಿದಂತೆ ಹಲವರು ಹಾಜರಿದ್ದರು.