ಮಂಡ್ಯ ತಾಲೂಕು ದುದ್ದ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಂ.ರಾಮಚಂದ್ರ ಉದ್ಘಾಟಿಸಿದರು.  
ಮಂಡ್ಯ

ಅಕ್ಕರೆಯ ಅಂಗಳದಲ್ಲಿ ಸಮಗ್ರ ಕಲಿಕೆ: ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪೂರ್ವಭಾವಿ ಸಭೆ
ಮಂಡ್ಯ: ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಕಲಿಕೆ ಹಾಗೂ ಮನರಂಜನೆಯ ಅವಕಾಶ ಒದಗಿಸುವುದು ಅಕ್ಕರೆಯ ಅಂಗಳ ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಶಿಬಿರ ಅರಿವು ಕೇಂದ್ರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದಿತ್ತು. ಆದ್ದರಿಂದ ಈ ವರ್ಷವೂ ಇನ್ನಷ್ಟು ಪರಿಣಾಮಕಾರಿಯಾಗಿ ಶಿಬಿರವನ್ನು ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಏ.17ರಿಂದ ಮೇ 26ರವರೆಗೆ ಜಿಲ್ಲೆಯ ಎಲ್ಲ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಕಡ್ಡಾಯವಾಗಿ ಶಿಬಿರವನ್ನು ನಡೆಸುವಂತೆ ಸೂಚಿಸಲಾಗಿದೆ. ಅಂತೆಯೇ ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಬೇಕು. ಶಿಬಿರದ ಯಶಸ್ಸಿಗಾಗಿ ಗ್ರಂಥಪಾಲಕರು, ಶಿಕ್ಷಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಇಲಾಖೆಗಳ ನಡುವೆ ಅಸಮನ್ವಯತೆ ಅಥವಾ ನಿರ್ಲಕ್ಷೃ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಂಚಾಯಿತಿ ಕೇಂದ್ರದಲ್ಲಿನ ಅರಿವು ಕೇಂದ್ರ ಮತ್ತು ಗ್ರಂಥಾಲಯಗಳನ್ನು ಶಿಬಿರದ ಮುಖ್ಯ ಕೇಂದ್ರಗಳಾಗಿ ಬಳಸಬೇಕು. ಅರಿವು ಕೇಂದ್ರಗಳಿಲ್ಲದ ಗ್ರಾಮಗಳಲ್ಲಿ ಶಾಲಾ ಆವರಣಗಳನ್ನು ಶಿಬಿರದ ಸ್ಥಳವಾಗಿ ಬಳಸಬಹುದು. ಶಿಕ್ಷಣ ಇಲಾಖೆಯ ಬಿಆರ್‌ಪಿ, ಸಿಆರ್‌ಪಿ ಹಾಗೂ ಶಿಕ್ಷಕರು ಶಿಬಿರದ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪ್ರತಿ ಪಂಚಾಯಿತಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಶಿಬಿರದ 34 ದಿನಗಳ ಕಾರ್ಯಕ್ರಮದಲ್ಲಿ ಗಣಿತ ಮತ್ತು ವಿಜ್ಞಾನ ಆಧಾರಿತ ಕಲಿಕೆ, ಕಲೆ, ಸಂಗೀತ, ನೃತ್ಯ, ಯೋಗ ಹಾಗೂ ಕೌಶಲ ಆಧಾರಿತ ತರಬೇತಿ ಒಳಗೊಂಡಿದ್ದು, ಮಕ್ಕಳ ನೋಂದಣಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಿ ಎಂದರು.
ಪ್ರತಿ ಮಗುವಿನ ಹೆಸರು, ವಯಸ್ಸು, ಶಾಲೆ ಮತ್ತು ಗ್ರಾಮದ ವಿವರಗಳಿರುವ ಗುರುತಿನ ಚೀಟಿ ನೀಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಕನಿಷ್ಟ ಶೇ.80ರಷ್ಟು ವಿದ್ಯಾರ್ಥಿಗಳನ್ನು ಶಿಬಿರಕ್ಕೆ ಒಳಪಡಿಸುವ ಗುರಿ ಇರಬೇಕು. ಶಿಬಿರದ ಮಾಹಿತಿ ವ್ಯಾಪಕವಾಗಿ ಪ್ರಸಾರ ಮಾಡಬೇಕು. ಸ್ಥಳ, ಸಮಯ (ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ) ಹಾಗೂ ಚಟುವಟಿಕೆಗಳ ವಿವರಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಶಿಬಿರದ ಪ್ರಗತಿಯನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಲಾಗುವುದು. ದಿನನಿತ್ಯದ ಮಾಹಿತಿ ಸಂಗ್ರಹಿಸಲು ವ್ಯವಸ್ಥೆ ರೂಪಿಸಲಾಗಿದೆ. ಆದ್ದರಿಂದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.
ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಪಿ.ಲಕ್ಷ್ಮೀ, ಡಿಡಿಪಿಐ ಜಿ.ಎ.ಲೋಕೇಶ್, ಡಯಟ್ ಪ್ರಾಂಶುಪಾಲ ಕೆ.ಯೋಗೇಶ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಪಂ ಇಒ ಹಾಗೂ ಪಿಡಿಒಗಳಿದ್ದರು.