ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು.  
ಮಂಡ್ಯ

ನೈಜ ವರದಿ ಸಲ್ಲಿಕೆಗೆ ಆದ್ಯತೆ ನೀಡಿ: ಜಿಪಂ ಸಿಇಒ ಕೆ.ಆರ್.ನಂದಿನಿ ನಿರ್ದೇಶನ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ
  • ವಿವಿಧ ಇಲಾಖೆ ಅಧಿಕಾರಿಗಳು ಭಾಗಿ
ಮಂಡ್ಯ: ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಮತ್ತು ಜಿಲ್ಲಾ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆ-2031(ಅವಶ್ಯಕತೆ ಆಧಾರಿತ ಸಾಕ್ಷಾಧಾರಿತ-ಫಲಿತಾಂಶ ಆಧಾರಿತ ಯೋಜನೆ) ವರದಿಗಳನ್ನು ತಯಾರಿಸುವ ಕುರಿತು ವಲಯವಾರು ಉಪ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆ ಜಿಪಂ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಯಾವುದೇ ಅಪೂರ್ಣ ಮಾಹಿತಿ ಅಥವಾ ಖಾಲಿ ಅಂಶಗಳು ಉಳಿಯದಂತೆ ಎಲ್ಲ ಇಲಾಖೆಗಳು ಅಧಿಕೃತ ದಾಖಲೆಗಳ ಆಧಾರದ ಮೇಲೆ ನಿಖರ ಮಾಹಿತಿಯನ್ನು ಒದಗಿಸಬೇಕು. ಜಿಲ್ಲಾ ಮಾನವ ಅಭಿವೃದ್ಧಿ ವರದಿಯ ವಿವಿಧ ಸೂಚ್ಯಂಕಗಳಲ್ಲಿ ಹಲವೆಡೆ ಮಾಹಿತಿಯ ಕೊರತೆ ಹಾಗೂ ಶೂನ್ಯ ಅಂಕಿ ಅಂಶಗಳು ದಾಖಲಾಗಿರುವುದು ಕಂಡುಬಂದಿದ್ದು, ಸಂಬಂಧಿಸಿದ ಇಲಾಖೆಗಳು ನೀಡಿರುವ ಮಾಹಿತಿಯನ್ನು ಮರು ಪರಿಶೀಲಿಸಿ ಅಧಿಕೃತ ದೃಢೀಕರಣದೊಂದಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ವಿಶೇಷವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಅಪರಾಧ ಸಾಬೀತು ಪ್ರಮಾಣ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸ್ವಂತ ಆದಾಯ ಸಂಗ್ರಹಣೆ, ಸಾಮಾಜಿಕ ಭದ್ರತಾ ಯೋಜನೆಗಳ ಮೇಲಿನ ವೆಚ್ಚ, ಕುಡಿಯುವ ನೀರಿನ ಗುಣಮಟ್ಟ ಸೇರಿದಂತೆ ವಿವಿಧ ಅಂಶಗಳಲ್ಲಿ ನೈಜ ಹಾಗೂ ಸಾಕ್ಷ್ಯಾಧಾರಿತ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.
ಯಾವುದೇ ಮಾಹಿತಿಯನ್ನು ಊಹಾಪೋಹಗಳ ಆಧಾರದ ಮೇಲೆ ನಮೂದಿಸದೆ, ಸಂಬಂಧಿಸಿದ ಇಲಾಖೆಗಳ ಲಿಖಿತ ದೃಢೀಕರಣದೊಂದಿಗೆ ಮಾತ್ರ ವರದಿಯಲ್ಲಿ ಸೇರಿಸಬೇಕು. ತಪ್ಪು ಮಾಹಿತಿ ಸಲ್ಲಿಕೆಯಿಂದ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತವಾದ ಪ್ರಶ್ನೆ ಎದುರಾಗುವ ಸಾಧ್ಯತೆ ಇರುವುದರಿಂದ ಪ್ರತಿ ಮಾಹಿತಿಗೂ ದಾಖಲೆ ಆಧಾರ ಇರಬೇಕು. ಬಾಕಿ ಇರುವ ಎಲ್ಲ ಮಾಹಿತಿಯನ್ನು ಒಂದು ವಾರದೊಳಗೆ ಸಂಗ್ರಹಿಸಿ, ಜುಲೈ ಮೊದಲ ವಾರದೊಳಗೆ ಸಂಪೂರ್ಣ ವರದಿಯನ್ನು ಅಂತಿಮಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಜಿಪಂ ಮುಖ್ಯಯೋಜನಾಧಿಕಾರಿ ಧನುಷ್, ಡಾ.ದಿವ್ಯಶ್ರೀ, ನಮಿತಾ, ಡಾ.ಚೇತನ್, ಡಾ.ಸುರೇಶ್, ಎನ್.ಅನಿತಾ ಇತರರಿದ್ದರು.