ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ಸಂಕ್ರಾಂತಿಯ ಪುಷ್ಪಾಲಂಕಾರ
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಜ.5ರಿಂದ 10 ದಿನಗಳ ಕಾಲ ಕೊಠಾರೋತ್ಸವ ಎಂದೇ ಕರೆಯುವ ಅಧ್ಯಯನೋತ್ಸವ ನೆರವೇರಲಿದೆ.
ವೈಷ್ಣವಪಂಥದಲ್ಲಿ ನಾರಾಯಣನ ಸಾಕ್ಷಾತ್ಕಾರ ಪಡೆದು ದೈವತ್ವಕ್ಕೇರಿದ 12ಮಂದಿ ಆಳ್ವಾರುಗಳಿಗೆ ಧನುರ್ಮಾಸದ ವೇಳೆ ವಿಶೇಷ ಮಾಲೆಮರ್ಯಾದೆ ಸಮರ್ಪಿಸುವ ಹಾಗೂ ಅವರನ್ನು ನೆನೆಯುವ ಮಹೋತ್ಸವವಾಗಿದೆ.
ಕೊಠಾರಮಂಟಪದಲ್ಲಿ ಪ್ರತಿಸಂಜೆ ಆಳ್ವಾರುಗಳು ಮತ್ತು ರಾಮಾನುಜಾರ್ಯರಿಗೆ ಮಾಲೆಮರ್ಯಾದೆ ನಡೆಯಲಿದೆ. ಸಂಗೀತರಾಮಾಯಣ, ಅರೆಯರ್‌ಪಾಟ್ಟು ಹಾಗೂ ದಿವ್ಯಪ್ರಬಂಧಪಾರಾಯಣದೊಂದಿಗೆ ಚೆಲುವನಾರಾಯಣನಿಗೆ ಉತ್ಸವಗಳು ನಡೆಯಲಿದೆ.
ಪ್ರತಿದಿನ ಸಂಜೆ ರಾಜಬೀದಿಯಲ್ಲಿ ವಿವಿಧ ಕೈಂಕರ್ಯಪರರಿಂದ ಅನೂಚಾನ ಸಂಪ್ರದಾಯ ಹಾಗೂ ದೇವಾಲಯದ ಕೈಪಿಡಿಯಲ್ಲಿ ಉಲ್ಲೇಖವಾದಂತೆ ನೇಮಿಸೆವೆಯಾಗಿ ಚೆಲುವನಾರಾಯಣಸ್ವಾಮಿಗೆ ಪುಷ್ಪ ಕೈಂಕರ್ಯ ನಂತರ ದೇವಾಲಯದಲ್ಲಿ ಸೇವೆಗಳು ನಡೆಯಲಿದೆ. ಪ್ರತಿದಿನ ಚೆಲುವನಾರಾಯಣಸ್ವಾಮಿ ವೈವಿಧ್ಯಮಯ ಪುಷ್ಪಾಲಂಕಾರದೊಂದಿಗೆ ಕಂಗೊಳಿಸಲಿದೆ. ಮೇಲುಕೋಟೆಯ ಪಾರಂಪರಿಕ ನೈವೇಧ್ಯಗಳು ಸ್ವಾಮಿಗೆ ಅರ್ಪಣೆಯಾಗುವುದು ಕೊಠಾರೋತ್ಸವದ ವಿಶೇಷವಾಗಿದೆ. ಚೆಲುವನಾರಾಯಣಸ್ವಾಮಿ ಕೊಠಾರೋತ್ಸವವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೀಲಾರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತದೆ ಎಂದು ಪಾರುಪತ್ತೇಗಾರ್ ಹಾಗೂ ಸ್ಥಾನಾಚಾರ್ಯರಾದ ಶ್ರೀನಿವಾಸನರಸಿಂಹನ್ ಗುರೂಜಿ ತಿಳಿಸಿದ್ದಾರೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೊಠಾರೋತ್ಸವದಲ್ಲಿ ಚೆಲುವನಾರಾಯಣಸ್ವಾಮಿ ಹಾಗೂ 12 ಆಳ್ವಾರುಗಳನ್ನು ಒಟ್ಟಾಗಿ ದರ್ಶನ ಮಾಡಬಹುದು. ವರ್ಷದಲ್ಲಿ ಹತ್ತು ದಿನಗಳ ಕಾಲಮಾತ್ರ ಈ ಅವಕಾಶವಿರುತ್ತದೆ. ಜ.5ರಂದು ನಡೆಯುವ ಪ್ರಥಮ ಉತ್ಸವದೊಂದಿಗೆ ಉತ್ಸವಾದಿಗಳು ಆರಂಭವಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.