ಕೆ.ಆರ್.ಸಾಗರ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಶ್ರೀರಂಗಪಟ್ಟಣ ತಾಲೂಕು ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಂ.ಬಿ.ಕುಮಾರ್ ಚಾಲನೆ ನೀಡಿದರು. ಚೆಲುವರಾಜು, ಚಂದ್ರು, ವರುಣ್, ಸುರೇಶ್, ಜಯಲಕ್ಷ್ಮೀ ಇತರರಿದ್ದರು.
ಕೆ.ಆರ್.ಸಾಗರ: ಶ್ರೀರಂಗಪಟ್ಟಣ ತಾಲೂಕು ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕೆ.ಆರ್.ಸಾಗರ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಿ.ಕುಮಾರ್ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರ ಸಂಘದ ಅಧ್ಯಕ್ಷ ಚೆಲುವರಾಜು ಮಾತನಾಡಿ, ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಾಂಸ್ಕೃತಿಕ ಚಟುವಟಿಕೆ ಮುಖ್ಯ. ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇಂತಹ ವೇದಿಕೆ ಪ್ರಮುಖವಾಗಿದೆ. ಶಿಕ್ಷಕರು ಮತ್ತು ಪಾಲಕರು ಪ್ರೋತ್ಸಾಹ ನೀಡಬೇಕು ಎಂದರು.
ರಸಪ್ರಶ್ನೆ, ಕನ್ನಡ, ಇಂಗ್ಲಿಷ್ ಪ್ರಬಂಧ ಸರ್ಧೆ, ಕನ್ನಡ ಮತ್ತು ಇಂಗ್ಲಿಷ್ ಚರ್ಚಾ ಸ್ಪರ್ಧೆ, ಏಕಾಪಾತ್ರ ಅಭಿನಯ, ಜನಪದ ನೃತ್ಯ, ಭಾವಗೀತೆ ಗಾಯನ, ಚಿತ್ರಕಲೆ, ವಿಜ್ಞಾನ ಮಾದರಿ, ಜಾನಪದ ಗೀತೆ ಗಾಯನ ಸ್ಪರ್ಧೆಗಳು ನಡೆದವು. 15 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಭಾರ ಪ್ರಾಂಶುಪಾಲ ಚಂದ್ರು, ಉಪ ತಹಸೀಲ್ದಾರ್ ವರುಣ್, ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸುರೇಶ್, ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲೆ ಜಯಲಕ್ಷ್ಮೀ, ಪದವಿ ಕಾಲೇಜು ಪ್ರಾಂಶುಪಾಲೆ ಶಿಲ್ಪಶ್ರೀ, ಗ್ರಾಪಂ ಮಾಜಿ ಸದಸ್ಯರಾದ ಸ್ನೇಕ್ ದೀಪು, ದೇವರಾಜು, ವೆಂಕಟೇಶ್, ಗುತ್ತಿಗೆದಾರ ಜಗದೀಶ್, ಪ್ರಾಂಶುಪಾಲರು, ಶಿಕ್ಷಕರು ಭಾಗವಹಿಸಿದ್ದರು.