ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಅನಿಲ್‌ಕುಮಾರ್ ಮಾತನಾಡಿದರು. ಕೆ.ಕಬ್ಬಾಳಯ್ಯ, ಚಿದಂಬರ ಮೂರ್ತಿ, ಅಮೀನ್ ಶಿವಲಿಂಗಯ್ಯ ಇತರರಿದ್ದರು.
- ಪೊಲೀಸ್ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಹೇಳಿಕೆ
ಕೆ.ಎಂ.ದೊಡ್ಡಿ: ದಲಿತ ಸಮುದಾಯಗಳ ಕಾಲನಿಯಲ್ಲಿ ಅಕ್ರಮ ಮದ್ಯಮಾರಾಟ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಎಚ್ಚರಿಕೆ ನೀಡಿದರು.
ಪೊಲೀಸ್ ಠಾಣೆಯಲ್ಲಿ ದಲಿತ ಕುಂದುಕೊರತೆ ಸಭೆಯಲ್ಲಿ ದಲಿತ ಸಮುದಾಯದ ಮುಖಂಡರು ದಲಿತ ಕೇರಿಗಳಲ್ಲಿ ಅನಧಿಕೃತ ಮದ್ಯಪಾನ, ಮಾರಾಟದ ಬಗ್ಗೆ ದೂರು ಸಲ್ಲಿಸಿದ ವೇಳೆ ಪ್ರತಿಕ್ರಿಯಿಸಿದ ಅವರು, ದಲಿತ ಸಮುದಾಯ ಕಾಲನಿಗಳಲ್ಲಿ ಶಾಂತಿ ಕಾಪಾಡಲು ಕಟ್ಟು ನಿಟ್ಟಿನ ಕ್ರಮ ಜರುಗಿಸುತ್ತಿರುವ ಹಿನ್ನೆಲೆ ಅಕ್ರಮ ಮದ್ಯ ಮಾರಟಕ್ಕೆ ಕಡಿವಾಣ ಹಾಕಬೇಕು ಎಂದು ಎಚ್ಚರಿಸಿದರು.
ದಲಿತರ ಹಿತ ಕಾಯಲು ಹಾಗೂ ಕಾನೂನು ಸುವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಬಿಟ್ ಪೊಲೀಸ್ ಹಾಗೂ ಮಹಿಳಾ ಸಿಬ್ಬಂದಿ ಜತೆಗೂಡಿ ಪ್ರತಿ ಗ್ರಾಮಗಳಲ್ಲಿ ಸಮುದಾಯದ ಜನರ ಸಮಸ್ಯೆಗಳ ಆಲಿಸುವ ನಿಟ್ಟಿನಲ್ಲಿ ಮುಕ್ತವಾಗಿ ಚರ್ಚಿಸಿ ಅವರ ದೂರಗಳನ್ನು ಪಡೆದು ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮುಖಂಡರು ಪರಿಶಿಷ್ಟ ಕಾಲನಿಗಳಲ್ಲಿ ಬಿಟ್ ವ್ಯವಸ್ಥೆ ಬಲಗೊಳಿಸಬೇಕು. ಗ್ರಾಮೀಣ ಭಾಗಗಳಲ್ಲಿ ದೇವಾಲಯಗಳಿಗೆ ಹಾಗೂ ಹೋಟೆಲ್‌ಗಳಿಗೆ ದಲಿತರಿಗೆ ಮುಕ್ತ ಪ್ರವೇಶ ಇಲ್ಲದೆ ಅಸ್ಪೃಶ್ಯತೆ ಆಚರಣೆ ಕಂಡು ಬಂದಿದೆ. ಅಸ್ಪೃಶ್ಯತೆ ಆಚರಣೆ ಮಾಡದಂತೆ ನಿಗಾ ವಹಿಸಬೇಕು. ಅಬಕಾರಿ ಇಲಾಖೆ ಸಹಕಾರದೊಂದಿಗೆ ದಾಳಿ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಕಾನೂನು ಚೌಕಟ್ಟಿನಲ್ಲಿ ನಿಮ್ಮ ದೂರಗಳ ಬಗ್ಗೆ ಕ್ರಮವಹಿಸಲಾಗುವುದು. ಪೊಲೀಸ್ ಇಲಾಖೆಯ ಇಆರ್‌ಎಸ್ ವಾಹನಗಳ ಬಗ್ಗೆ ಹಾಗೂ ಸಂಚಾರ ನಿಯಮಗಳು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ, ಅಪರಾಧ ತಡೆಗಟ್ಟಲು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಮುದಾಯ ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ದಲಿತ ಮುಖಂಡರಾದ ಮಣಿಗೆರೆ ಕೆ.ಕಬ್ಬಾಳಯ್ಯ, ಚಿದಂಬರ ಮೂರ್ತಿ, ಅಮೀನ್ ಶಿವಲಿಂಗಯ್ಯ, ಕರಡಕೆರೆ ಯೋಗೇಶ್ ಚಿಕ್ಕರಸಿನಕೆರೆ ಮೂರ್ತಿ, ಟಿಬಿ ಹಳ್ಳಿ ಸಂತೋಷ್, ಡಿ.ಎ. ಕೆರೆ ಸಣ್ಣಪ್ಪ, ಶೆಟ್ಟಹಳ್ಳಿ ಪುಟ್ಟಯ್ಯ, ಜಗ್ಗಿ ಪೂಜಾರಿ ಸಿದ್ದರಾಜು, ಪ್ರಸಾದ್ ಇತರರಿದ್ದರು.